ಅಭಿವೃದ್ಧಿಯೆಂದರೆ ಬರೀ ಸ್ಥಾವರ ಕಟ್ಟುವುದಲ್ಲ: ಡಾ. ಪ್ರಕಾಶ ಭಟ್ಟ

KannadaprabhaNewsNetwork | Published : Jun 20, 2024 1:09 AM

ಸಾರಾಂಶ

ಕಟ್ಟಡ, ಸಂಘ- ಸಂಸ್ಥೆಗಳ ನಿರ್ಮಾಣ ಮತ್ತು ರಸ್ತೆಗಳ ಕಾಮಗಾರಿ ಸೇರಿದಂತೆ ವಿವಿಧ ಸಂಗತಿಗಳೇ ಅಭಿವೃದ್ಧಿಯ ಮಾನದಂಡವಾಗಿರದೇ, ಇಂತಹ ಸಂಗತಗಳ ವಿರುದ್ಧವೇ ಸಾಗಿ ವಾಸ್ತವಿಕತೆಯನ್ನು ಮನಗಾಣಬೇಕಾದ ಅನಿವಾರ್ಯ ಅಗತ್ಯ ಇಂದಿನದಾಗಿದೆ.

ಯಲ್ಲಾಪುರ: ಇತ್ತೀಚೆಗೆ ಅಭಿವೃದ್ಧಿ ಎಂಬುದು ಮಾನವ ನಿರ್ಮಿತ ಸೃಷ್ಟಿಗೇ ಸೀಮಿತವಾಗಿದ್ದು, ಅಭಿವೃದ್ಧಿಯೆಂದರೆ ಸ್ಥಾವರ ಕಟ್ಟುವ ಪ್ರಯತ್ನವಾಗಿರದೇ ಜಂಗಮ ನಿರ್ಮಾಣದ ಆಶಯ ಹೊಂದಿರಬೇಕು ಎಂದು ಬೈಫ್ ಸಂಸ್ಥೆಯ ನಿವೃತ್ತ ಅಧಿಕಾರಿ ಡಾ. ಪ್ರಕಾಶ ಭಟ್ಟ ತಿಳಿಸಿದರು.

ಜೂ. ೧೯ರಂದು ತಾಲೂಕಿನ ಮಂಚೀಕೇರಿಯ ಹಾಸಣಗಿ ಗ್ರೂಪ್‌ ಗ್ರಾಮಗಳ ಸೇವಾ ಸಹಕಾರಿ ಸಂಘ ಮತ್ತು ಸ್ಥಾನಿಕ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಳ್ಳಿಗಳನ್ನು ಕಟ್ಟುವ ಕಷ್ಟ- ಸುಖ ಎಂಬ ತಮ್ಮದೇ ಪುಸ್ತಕದ ಕುರಿತಾಗಿ ಸಮುದಾಯದ ಜತೆಗಿನ ಸಂವಾದದಲ್ಲಿ ಮಾತನಾಡಿದರು.

ಕಟ್ಟಡ, ಸಂಘ- ಸಂಸ್ಥೆಗಳ ನಿರ್ಮಾಣ ಮತ್ತು ರಸ್ತೆಗಳ ಕಾಮಗಾರಿ ಸೇರಿದಂತೆ ವಿವಿಧ ಸಂಗತಿಗಳೇ ಅಭಿವೃದ್ಧಿಯ ಮಾನದಂಡವಾಗಿರದೇ, ಇಂತಹ ಸಂಗತಗಳ ವಿರುದ್ಧವೇ ಸಾಗಿ ವಾಸ್ತವಿಕತೆಯನ್ನು ಮನಗಾಣಬೇಕಾದ ಅನಿವಾರ್ಯ ಅಗತ್ಯ ಇಂದಿನದಾಗಿದೆ ಎಂದರು.

ಹಳ್ಳಿಗಳಲ್ಲಿ ನಗರದ ವಾತಾವರಣ ಅಧಿಕವಾಗುತ್ತಿದ್ದು, ವ್ಯವಹಾರಗಳನ್ನೂ ಮೀರಿದ ಪರಾವಲಂಬನೆ ಮತ್ತು ಸಂಬಂಧಗಳು ಮಾನವೀಯತೆಯ ನೆಲೆಯಲ್ಲಿ ಮತ್ತಷ್ಟು ಹೆಚ್ಚಬೇಕಾಗಿದೆ. ಹೊಸದೆಲ್ಲವೂ ಕೆಟ್ಟದ್ದಾಗಿರದೇ, ಹಳತುಗಳ ಒಳಿತುಗಳನ್ನು ಹೊಸತನದೊಂದಿಗೆ ಜೋಡಿಸಿಕೊಂಡು ಮುನ್ನಡೆಯಬೇಕಾಗಿರುವ ನಾವು ಅನುಸರಿಸುತ್ತಿರುವ ಉಪದೇಶಗಳ ಪ್ರಕ್ರಿಯೆ ಸದಾಕಾಲ ಸ್ವೀಕೃತವಾಗಲೆಂಬ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ ಎಂದರು.

ನಿವೃತ್ತ ಉಪನ್ಯಾಸಕ ಸಾಹಿತಿ ಡಾ. ಶ್ರೀಧರ ಬಳಗಾರ ಮಾತನಾಡಿ, ಆಲೋಚನೆಗಳಿಲ್ಲದ ಅಧ್ಯಯನರಹಿತ ಕಾರ್ಯಗಳು ಎಂದಿಗೂ ವ್ಯರ್ಥವೇ. ನಾವು ನಂಬಿಕೊಂಡಿರುವ ವಿಚಾರಗಳು ಎಲ್ಲ ಕಾಲಕ್ಕೂ ಉಪಯೋಗಕ್ಕೆ ಬಾರದಿರಬಹುದು. ಹಣ ಗಳಿಕೆಯೊಂದೇ ಬದುಕಿನ ಸಾರಸರ್ವಸ್ವವಾಗಿರದೇ ಅದು ನೆಮ್ಮದಿಯನ್ನೂ ಕಸಿದುಕೊಳ್ಳಲು ಕಾರಣವೂ ಆಗಬಲ್ಲುದು. ಈ ಹಿನ್ನೆಲೆಯಲ್ಲಿ ವ್ಯವಸ್ಥಿತವಾದ ನಿಧಾನ ಅಭಿವೃದ್ಧಿ ನಿರಂತರ ನಡೆಯಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸೇ.ಸ. ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತನಾಡಿ, ಅಭಿವೃದ್ಧಿ ನಿಂತ ನೀರಾಗದೇ, ಸಂಘಟನೆ ಮೂಲಕ ಸಾಮರಸ್ಯದ ನಿರ್ಮಿತಿ ಆಗಬೇಕಾಗಿದೆ. ಆರ್ಥಿಕತೆಯ ಆರಾಧನೆ ಎಲ್ಲೆಡೆ ಬಹುಪ್ರಮಾಣದಲ್ಲಿ ನಡೆಯುತ್ತಿರುವುದು ಎಲ್ಲ ಅವಾಂತರಗಳಿಗೆ ಕಾರಣವಾಗಿದೆ ಎಂದರು.

ರಂಗಕರ್ಮಿ ಆರ್.ಎನ್. ಭಟ್ಟ ಧುಂಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ಎನ್. ಭಟ್ಟ ನಿರ್ವಹಿಸಿದರು. ಉಪಾಧ್ಯಕ್ಷ ಟಿ.ವಿ. ಹೆಗಡೆ ಬೆದೆಹಕ್ಕಲು ವಂದಿಸಿದರು.

Share this article