ರಸ್ತೆ ಸುಧಾರಣೆ, ತಡೆಗೋಡೆ ನಿರ್ಮಾಣಕ್ಕೆ ಭೀಮಣ್ಣ ನಾಯ್ಕ ಚಾಲನೆ
ತಾಲೂಕಿನ ಕುಳವೆ ಗ್ರಾಪಂ ವ್ಯಾಪ್ತಿಯ ತೆರಕನಹಳ್ಳಿ ಗ್ರಾಮದಲ್ಲಿ ರಸ್ತೆ ಸುಧಾರಣೆ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಮಂಜೂರಾದ ₹1.20 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ₹85 ಲಕ್ಷಗಳಲ್ಲಿ ಮಂಜೂರಾದ ತಾಲೂಕಿನ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣಿ ಹಾಗೂ ರಸ್ತೆ ಬದಿ ಧರೆ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ ಮಂಜೂರಾದ ₹30 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಸೇರಿದಂತೆ ಒಟ್ಟೂ ₹1.20 ಕೋಟಿ ವೆಚ್ಚದ 2 ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ನಂತರ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಭಾಗ ಎಂಬ ತಾರತಮ್ಯವಿಲ್ಲದೇ ಸಮನಾಗಿ ಅನುದಾನ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು, ಪಂಚ ಗ್ಯಾರಂಟಿ ಯೋಜನೆಗಳ ಜತೆ ಅಭಿವೃದ್ಧಿಗೂ ಅನುದಾನ ನೀಡುತ್ತಿದೆ. ಆದ್ದರಿಂದ ವಿರೋಧ ಪಕ್ಷದವರು ಮಾತನಾಡಲು ಅವಕಾಶವಿಲ್ಲದಂತಾಗಿದೆ ಎಂದರು.
ಕುಳವೆ ಗ್ರಾಪಂ ಮಾಜಿ ಸದಸ್ಯ ಸಂದೇಶ ಭಟ್ಟ ಬೆಳಖಂಡ ಪ್ರಾಸ್ತಾವಿಕ ಮಾತನಾಡಿ, ಭೀಮಣ್ಣ ನಾಯ್ಕ ಶಾಸಕರಾದ ಬಳಿಕ ಕುಳವೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹2 ಕೋಟಿಗಿಂತ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ, ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಅಲ್ಲದೇ ಇನ್ನೂ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.
ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಕೆ. ಭಾಗ್ವತ ಶಿರ್ಸಿಮಕ್ಕಿ, ಕುಳವೆ ಗ್ರಾಪಂ ಮಾಜಿ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಘಟಕಾಧ್ಯಕ್ಷ ಮಂಜುನಾಥ ಭಟ್ಟ ಬೆಳಖಂಡ, ಪ್ರಮುಖರಾದ ಭರತ ಹೆಗಡೆ ಕೆಂಚಗದ್ದೆ, ನಾಗೇಶ ಹೆಗಡೆ, ರವಿ ಹೆಗಡೆ, ಗ್ರಾಮಸ್ಥರಾದ ಅಶೋಕ ನಾಯ್ಕ, ರಮೇಶ ನಾಯ್ಕ, ತಿಮ್ಮ ನಾಯ್ಕ ಮತ್ತಿತರರಿದ್ದರು.