ಸಿಎಂ ಸಿದ್ದರಾಮಯ್ಯ ಕೆಲ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅರೆಬರೆ ಒಳ ಮೀಸಲಾತಿ ಜಾರಿ ಮಾಡಲು ಮುಂದಾಗಿದ್ದು ಖಂಡನೀಯ
ಕುಷ್ಟಗಿ: ಸಂಪೂರ್ಣ ಒಳಮೀಸಲಾತಿ ಜಾರಿಯಾಗದೆ ಹುದ್ದೆಗಳ ಭರ್ತಿಗೆ ಮುಂದಾದ ಕಾಂಗ್ರೇಸ್ ಸರ್ಕಾರದ ವಿರುದ್ಧ ಪಟ್ಟಣದಲ್ಲಿ ಮಾದಿಗ ಮಹಾಸಭಾದಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಮಾಡಿ ತಮಟೆ ಚಳವಳಿ ನಡೆಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಸಮಾವೇಶಗೊಂಡ ಮಾದಿಗ ಸಮಾಜದ ಜನರು ಡಾ. ಬಿ.ಆರ್.ಅಂಬೇಡ್ಕರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಮೇಲ್ಸೆತುವೆಯವರೆಗೂ ತಮಟೆ ಚಳವಳಿ ಮೂಲಕ ಪಾದಯಾತ್ರೆ ಕೈಗೊಂಡು ರಾಷ್ಟ್ರೀಯ ಹೆದ್ದಾರಿ,ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ನೂರಾರು ಜನ ಮಾದಿಗ ಸಮುದಾಯದ ಯುವಕರು ಸರ್ಕಾರ, ಮುಖ್ಯಮಂತ್ರಿ, ಸಚಿವರ ವಿರುದ್ದ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ಒಳಮೀಸಲಾತಿ ರಾಜ್ಯ ಹೋರಾಟಗಾರ ಅಂಬಣ್ಣ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕೆಲ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅರೆಬರೆ ಒಳ ಮೀಸಲಾತಿ ಜಾರಿ ಮಾಡಲು ಮುಂದಾಗಿದ್ದು ಖಂಡನೀಯವಾಗಿದೆ. ಸುಪ್ರಿಂ ಕೋರ್ಟ ಆದೇಶ ಪ್ರಕಾರ ಒಳಮೀಸಲಾತಿ ಜಾರಿ ಮಾಡಬೇಕು ನಂತರದಲ್ಲಿ ಹುದ್ದೆಗಳಿಗೆ ನೇಮಕಾತಿ ಆಹ್ವಾನ ಮಾಡಬೇಕು ಎಂದರು.
ನಮ್ಮ ಮಾದಿಗ ಸಮುದಾಯವೂ ಯಾವುದೇ ಒಂದು ಪಕ್ಷಕ್ಕೆ ಒತ್ತೆಯಾಳಾಗಿಲ್ಲ, ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದು ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಮೀಸಲಾತಿ ಅಗತ್ಯವಿದ್ದು ಒಳ ಮೀಸಲಾತಿ ಜಾರಿಗೆ ನಮ್ಮ ಪ್ರಾಣ ಕೊಡಲು ಸಿದ್ದರಿದ್ದೇವೆ. ನಾವು 101 ಜಾತಿಗಳ ಪರ ಹೋರಾಟ ಮಾಡುತ್ತಿದ್ದು ಈ ಮೀಸಲಾತಿ ಯಾರಿಂದಲೂ ಕಿತ್ತಿಕೊಳ್ಳಲು ಸಾಧ್ಯವಿಲ್ಲ, ಮುಖ್ಯಮಂತ್ರಿಗಳು ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಬೇಕು ಇದರ ಜತೆಗೆ ಸರ್ಕಾರಿ ಸೌಲಭ್ಯ ಒದಗಿಸಿಕೊಡಬೇಕು ಎಂದರು.
ಮುಖಂಡ ಸುಕರಾಜ ತಾಳಕೇರಿ ಮಾತನಾಡಿ, ಒಳಮೀಸಲಾತಿ ಜಾರಿಗಾಗಿ ಸುಮಾರು 35 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದು, ರಾಜ್ಯದ ರಾಜಕಾರಣಿಗಳಲ್ಲಿ ಇಚ್ಚಾಶಕ್ತಿ ಕೊರತೆಯಿಂದ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ ಎಲ್ಲರೂ ಒಳಮೀಸಲಾತಿ ಪಡೆಯಲು ಹೋರಾಟ ಮಾಡಬೇಕಿದೆ ಎಂದರು.
ಪುರಸಭೆ ಮಾಜಿ ಸದಸ್ಯ ವಸಂತಕುಮಾರ ಮೇಲಿನಮನಿ ಮಾತನಾಡಿ,ಒಳಮೀಸಲಾತಿ ಜಾರಿಗಾಗಿ ಕುಷ್ಟಗಿಯಲ್ಲಿ ಅರೆಬೆತ್ತಲೆ ಮೆರವಣಿಗೆ,ಹುದ್ದೆಗಳ ಸ್ಥಾನಕ್ಕೆ ರಾಜಿನಾಮೆ ಸೇರಿದಂತೆ ಹಲವು ವಿಧಗಳಲ್ಲಿ ಹೋರಾಟ ಮಾಡುವ ಮೂಲಕ ಕುಷ್ಟಗಿಯು ರಾಜ್ಯಮಟ್ಟದಲ್ಲಿ ಹೆಸರು ಪಡೆದುಕೊಂಡಿದ್ದು, ಮಾ.12ರಂದು ನಡೆಯುವ ಬೃಹತ್ ಪ್ರಮಾಣದ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ನ್ಯಾಯವಾದಿ ಪಿ.ರಮೇಶ,ಮುಖಂಡ ಕಂದಕೂರಪ್ಪ ವಾಲ್ಮೀಕಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾದಿಗ ಮಹಾಸಭಾ ತಾಲೂಕಾಧ್ಯಕ್ಷ ನಾಗರಾಜ ಮೇಲಿನಮನಿ, ಹೋರಾಟಗಾರ ಹರೀಶ, ಶಿವಪುತ್ರಪ್ಪ ಗುಮಗೇರಿ, ಚಂದಾಲಿಂಗಪ್ಪ,ನಾಗರಾಜ ನಂದಾಪುರು, ಹನಮಂತ ಪೂಜಾರ,ಹುಸೇನಪ್ಪ ಮುದೇನೂರು, ಮಂಜುನಾಥ, ಕಾಶಿಮಪ್ಪ ಬಿಜಕಲ್, ಕೃಷ್ಣಮೂರ್ತಿ ಟೆಂಗುಂಟಿ, ಹೋರಾಟಗಾರ್ತಿ ಪಡಿಯಮ್ಮ, ನೀಲಪ್ಪ ಕಡಿ, ಶಿವರಾಜ ಕಟ್ಟಿಮನಿ, ನಿರೂಪಾದಿ ಕಲಕೇರಿ, ಛತ್ರಪ್ಪ ಮೇಗೂರು, ಹನಮಪ್ಪ ಕ್ಯಾದಿಗುಪ್ಪಿ ಸೇರಿದಂತೆ ನೂರಾರು ಜನರು ಇದ್ದರು. ಸಿಪಿಐ ವಿಶ್ವನಾಥ ಹಿರೇಗೌಡರ ಹಾಗೂ ಪಿಎಸೈ ಹನಮಂತಪ್ಪ ತಳವಾರ ಪೊಲೀಸ್ ಬಂದೋಬಸ್ತ್ ಒದಗಿಸಿಕೊಟ್ಟಿದ್ದರು. ಗ್ರೇಡ್ 2 ತಹಸೀಲ್ದಾರ ರಜನಿಕಾಂತ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಸಾಲುಗಟ್ಟಿ ನಿಂತ ವಾಹನಗಳು: ಮಾದಿಗ ಮಹಾಸಭಾದಿಂದ ಒಳ ಮೀಸಲಾತಿಗಾಗಿ ನಡೆಸಿದ ಹೋರಾಟದಲ್ಲಿ ಕುಷ್ಟಗಿ ಪಟ್ಟಣದ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯನ್ನು ಕೆಲಹೊತ್ತುಗಳ ಕಾಲ ಬಂದ್ ಮಾಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರಿಗೆ ತೊಂದರೆಯಾಯಿತು. ನೂರಾರು ವಾಹನ ಸಾಲುಗಟ್ಟಿ ನಿಂತಿದ್ದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.