ಕನ್ನಡಪ್ರಭ ವಾರ್ತೆ ಸಾಗರ
ಶಾಸಕಾಂಗ ಮತ್ತು ಕಾರ್ಯಾಂಗ ಉತ್ತಮವಾಗಿ ಕೆಲಸ ಮಾಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.ಪಟ್ಟಣದ ವಿನೋಬಾ ನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯ ೧.೫೦ ಕೋಟಿ ರು. ವೆಚ್ಚದ ನೂತನ ನೆಲಮಹಡಿ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ ಎಂದರು.
ಉತ್ತಮವಾಗಿ ಕೆಲಸ ಮಾಡುವ ನೌಕರರಿಗೆ ನನ್ನಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದ ಶಾಸಕರು, ಸುಮಾರು ೧.೫೦ ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ನೌಕರರ ಭವನದ ನೆಲ ಅಂತಸ್ತು ನಿರ್ಮಾಣವಾಗಿದೆ. ಹಿಂದಿನ ಶಾಸಕರಾದ ಹೆಚ್.ಹಾಲಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರು ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕಟ್ಟಡ ನೆಲ ಅಂತಸ್ತು ಮುಗಿದಿದ್ದು, ಉಳಿದ ಕಾಮಗಾರಿಗೆ ಬೇಕಾದ ಅನುದಾನವನ್ನು ನಾನು ಕೊಡಿಸುತ್ತೇನೆ. ಈ ಭವನವು ಸರ್ಕಾರಿ ನೌಕರರ ಕುಟುಂಬಗಳಿಗೆ ಶುಭ ಕಾರ್ಯ ನಡೆಸಲು ಅವಕಾಶ ಕಲ್ಪಿಸಲಿ ಎಂದು ಸಲಹೆ ನೀಡಿದರು.ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ೧೯೬೫ರಲ್ಲಿ ಮೇರಿ ದೇವಾಸಿಯ ಈ ಕಟ್ಟಡಕ್ಕೆ ಮೊದಲು ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಬಂದ ಎಲ್ಲಾ ಅಧ್ಯಕ್ಷರು ಕಟ್ಟಡ ನಿರ್ಮಾಣಕ್ಕಾಗಿ ತಮ್ಮದೇ ಪ್ರಯತ್ನ ನಡೆಸಿದ್ದರು. ಹಾಲಿ ಅಧ್ಯಕ್ಷ ಪರಮೇಶ್ವರ್ ಮತ್ತವರ ತಂಡ ನೂತನ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಪ್ರಯತ್ನ ನಡೆಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಮಾಡಿಕೊಂಡಾಗ ಹಿಂದಿನ ಸರ್ಕಾರದ ಮನವೊಲಿಸಿ ೧.೫೦ ಕೋಟಿ ರು. ಅನುದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರನ್ನೂ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ ಮಾತನಾಡಿದರು. ಉಪ ವಿಭಾಗಾಧಿಕಾರಿ ಯತೀಶ್ ಆರ್., ತಾಪಂ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ, ಮೋಹನ್ ಕುಮಾರ್, ಪಾಪಣ್ಣ, ಪ್ರಸನ್ನ ಕೆ., ಸತೀಶ್ ಟಿ.ವಿ, ಬಸವಣ್ಯಪ್ಪ, ಮಾಲತೇಶಪ್ಪ, ವಿ.ಚಂದ್ರಶೇಖರ್, ಲಕ್ಷ್ಮೀ ಭಾಗವತ್ ಇನ್ನಿತರರಿದ್ದರು.ರಾಘವೇಂದ್ರ ಕುಮಾರ್ ಸ್ವಾಗತಿಸಿದರು. ಅಣ್ಣಪ್ಪ ಡಿ.ಕೆ. ವಂದಿಸಿದರು. ಸೋಮಪ್ಪ ಮತ್ತು ಲಕ್ಷ್ಮಣ್ ನಾಯಕ್ ನಿರೂಪಿಸಿದರು.