ಕನ್ನಡಪ್ರಭ ವಾರ್ತೆ ಮಂಡ್ಯ
ಹೊಸ ಚಿಂತನೆ ಹಾಗೂ ಆವಿಷ್ಕಾರಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಸ್ಥಳದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಂಡ್ಯ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಶಿವಚಿತ್ತಪ್ಪ ಹೇಳಿದರು.ಮಹಿಳಾ ಸರ್ಕಾರಿ ಕಾಲೇಜಿನ ಮೌಲ್ಯಮಾಪನ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಂತರಿಕ ಗುಣಮಟ್ಟ ಭರವಸಾ ಕೋಶ ರೂಸಾ 2.0 ಅಡಿಯಲ್ಲಿ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರದಲ್ಲಿ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹೆಚ್ಚಳ ಮತ್ತು ಸುಸ್ಥಿರತೆಗಾಗಿ ವಿನೂತನ ಕ್ರಮಗಳು’ ಎಂಬ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಸಂಶೋಧನೆಯಲ್ಲಿ ಮತ್ತು ಅಧ್ಯಾಪನದಲ್ಲಿ ಹೊಸತನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರುವುದು ಅತಿಮುಖ್ಯ. ಖಾಸಗಿ ವಿಶ್ವವಿದ್ಯಾನಿಲಯಗಳಿಂದ ಸರ್ಕಾರಿ ವಿಶ್ವವಿದ್ಯಾನಿಲಯದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಮಾತು ಹೆಚ್ಚಾಗಿ ಕಂಡುಬರುತ್ತಿದೆ. ಅದನ್ನು ಹೋಗಲಾಡಿಸಲು ಸರ್ಕಾರಿ ಸಂಸ್ಥೆಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸೆಮಿನಾರ್, ಕಾರ್ಯಾಗಾರ ತರಬೇತಿಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಮಾಡಬೇಕು. ಆಗ ಮಾತ್ರ ಸರ್ಕಾರಿ ಸಂಸ್ಥೆಗಳು ಉತ್ಕೃಷ್ಟಗೊಳ್ಳುತ್ತವೆ. ಕಾರ್ಯದಕ್ಷತೆಯನ್ನು ಹೆಚ್ಚಿಸಲು ಆವಿಷ್ಕಾರಗಳು ಸಹಾಯ ಮಾಡುತ್ತವೆ, ನಾವು ಖಾಸಗಿ ಸಂಸ್ಥೆಗಳೊಂದಿಗೆ ಪೈಪೋಟಿ ಮಾಡಬೇಕಿರುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹಾಗಾಗಿ ಅಧ್ಯಾಪಕರು ಹೊಸ ಶೈಲಿಯ ಅಧ್ಯಾಪನ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಹೇಳಿದರು.ಕನ್ನಡದ ಜೊತೆಗೆ ಇಂಗ್ಲಿಷ್ ಶಿಕ್ಷಣವೂ ಸಹ ಪ್ರಮುಖವಾದದ್ದು, ಮಾತೃಭಾಷೆಯ ಬಗ್ಗೆ ಇರುವ ಗೌರವದ ಜೊತೆಗೆ ಜಾಗತಿಕ ಭಾಷೆಯನ್ನು ಮಕ್ಕಳಿಗೆ ಕಲಿಸುವ ಪ್ರಯತ್ನ ಅಧ್ಯಾಪಕರು ಮಾಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವಿದ್ದೇವೆ, ಇಂತಹ ಸಂದರ್ಭದಲ್ಲಿ ಸಂವಹನದ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ತಿಳಿಸಿದರು.
ಪ್ರಾಧ್ಯಾಪಕರು ತಮ್ಮ ನಿರ್ದಿಷ್ಟ ವಿಷಯದಲ್ಲಿ ಪರಿಪೂರ್ಣ ಜ್ಞಾನ ಹೊಂದಿರಬೇಕು, ಆಗ ಮಾತ್ರ ವಿದ್ಯಾರ್ಥಿಗಳಿಗೆ ವಿಷಯದ ಕುರಿತು ಪರಿಣಾಮಕಾರಿಯಾಗಿ ತಿಳಿಸಲು ಸಾಧ್ಯ, ಅಧ್ಯಾಪಕರು ಹೊಸ ಹೊಸ ಚಿಂತನೆ, ಆವಿಷ್ಕಾರಗಳ ಅಧ್ಯಯನ ನಡೆಸಬೇಕು, ಹೆಚ್ಚು ಹೆಚ್ಚು ವಿಷಯಗಳ ಕುರಿತು ನಿರಂತರವಾಗಿ ಅಧ್ಯಯನಶೀಲರಾಗಬೇಕು ಎಂದು ಹೇಳಿದರು.ನಂತರ ಮಾತನಾಡಿದ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು, ಶಿಕ್ಷಣ ವೃತ್ತಿ ಇತರೆ ವೃತ್ತಿಗಿಂತ ತುಂಬಾ ಶ್ರೇಷ್ಠವಾದದ್ದು. ಸಮಾಜದ ಬದಲಾವಣೆಯಲ್ಲಿ ಮಹತ್ತರವಾದ ಕೊಡುಗೆ ನೀಡುವ ಕೆಲಸವಾಗಿದೆ, ಶಿಕ್ಷಣ ನೀಡುವವರಿಗೆ ವಿದ್ಯಾರ್ಥಿಗಳಿಗೆ ಹೇಗೆ ಶಿಕ್ಷಣ ತಲುಪಿಸಬೇಕೆಂಬ ಅರಿವು ಇದ್ದರೆ ''''''''ಉನ್ನತ ಶಿಕ್ಷಣ'''''''' ಎಂಬ ಪದಕ್ಕೆ ಅರ್ಥ ನೀಡಿದಂತಾಗುತ್ತದೆ, ನಾವು ಅಧ್ಯಯನಶೀಲತೆ ಬೆಳೆಸಿಕೊಂಡದ್ದೇ ಆದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ ಎಂದರು.
ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೇ ಆದರೆ ಶಿಕ್ಷಣ ಗುಣಮಟ್ಟ ತಾನಾಗಿಯೇ ಹೆಚ್ಚಾಗುತ್ತದೆ, ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಉಪನ್ಯಾಸ ನೀಡುತ್ತಾ ಹೋದರೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು, ಅಧ್ಯಾಪಕರಾದವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಸಂಸ್ಥೆಯ ಬೆಳವಣಿಗೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿದರೆ ಆ ಸಂಸ್ಥೆ ಸರ್ವತೋಮುಖ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್. ಶ್ರೀನಿವಾಸ್, ಮೈಸೂರು ಜೆಎಸ್ಎಸ್ ಅಕಾಡೆಮಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಕೆ. ರವೀಶ, ಐಕ್ಯೂಎಸಿ ಸಂಚಾಲಕಿ, ಪ್ರೊ.ಜಯಲಕ್ಷ್ಮೀ ಬಿ., ಐಕ್ಯೂಎಸಿ ಸಹಸಂಚಾಲಕಿಯಾದ ಶಿರಿನ್ ತಾಜ್, ರೂಸಾ ಸಂಯೋಜಕರಾದ ಡಾ. ಮಂಗಳಮ್ಮ ಕೆ ಎಂ., ಪತ್ರಾಂಕಿತ ವ್ಯವಸ್ಥಾಪಕರಾದ ರವಿಕಿರಣ್ ಕೆ. ಪಿ. ಸೇರಿ ಇನ್ನಿತರರು ಉಪಸ್ಥಿತರಿದ್ದರು.