ಹೊನ್ನಾವರ: ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಪಪಂ ಹೊನ್ನಾವರ, ಮಂಕಿ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ನಿಯಮಗಳು 2016 ರ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಪಟ್ಟಣದ ಸಭಾಭವನದಲ್ಲಿ ನಡೆಯಿತು.
ನಿವೃತ್ತ ಉಪನ್ಯಾಸಕ ಜಿ.ಪಿ ಪಾಠಣಕರ ಮಾತನಾಡಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳಿಗೆ ದೌರ್ಜನ್ಯ ಆಗುತ್ತಿತ್ತು. ಇದನ್ನು ಮನಗಂಡು ಡಾ.ಅಂಬೇಡ್ಕರ್ ಸಂವಿಧಾನ ತಂದು ಸಮಾನತೆಯನ್ನು ತರುವಲ್ಲಿ ಹೋರಾಟ ನಡೆಸಿದರು. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಕೆಲವರಿಂದ ದುರುಪಯೋಗವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಹಾಯಕ ಸರ್ಕಾರಿ ಅಭಿಯೋಜಕ ಸಂಪದಾ ಗುನಗಾ ಮಾತನಾಡಿ, ಕಾಯಿದೆಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಇದಕ್ಕೆ ಪೂರಕವಾದ ದಾಖಲೆಗಳಿಲ್ಲದೇ ಇದ್ದರೆ ಸಮಯ, ಹಣವೆಲ್ಲ ವ್ಯರ್ಥವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಎಸು ಬೆಂಗಳೂರು ಮಾತನಾಡಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಕಾನೂನುಗಳ ಅರಿವು ಕಾರ್ಯಕ್ರಮದಿಂದ ಜನರಲ್ಲಿ ಜಾಗೃತಿ ಮೂಡುತ್ತದೆ ಎಂದರು.ವೇದಿಕೆಯಲ್ಲಿ ಇಒ ಚೇತನಕುಮಾರ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಾಜಶೇಖರ, ತುಳಸೀದಾಸ ಪಾವಸ್ಕರ, ಪ್ರಭು ಹಳ್ಳೇರ, ಜಿ.ಟಿ. ಹಳ್ಳೇರ, ವಿನಾಯಕ ಅವಧಾನಿ, ರಾಧಾಕೃಷ್ಣ ಇದ್ದರು.
ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.