ಹಾಸನ ಜಿಲ್ಲಾ ವಕೀಲರ ಸಂಘದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ
ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ನಂತರ ಬೆಂಗಳೂರು ನಗರದಲ್ಲಿ ವಾಣಿಜ್ಯದ ಉದ್ದೇಶಕೋಸ್ಕರ ಬೃಹತ್ ಪೇಟೆಗಳನ್ನ ನಿರ್ಮಿಸಿರುತ್ತಾರೆ. ಅವರು ಕೆರೆಕಟ್ಟೆಗಳನ್ನು ಕಟ್ಟಿಸಿರುತ್ತಾರೆ. ಎಲ್ಲ ಜನಾಂಗದ ಅಭಿವೃದ್ಧಿಯನ್ನು ಮಾಡಿ ಮಾದರಿ ವ್ಯಕ್ತಿಯಾಗಿ ಇಂದಿಗೂ ಸಹ ಅವರ ಕಾರ್ಯ ಮೆಚ್ಚುವಂತದ್ದಾಗಿರುತ್ತದೆ ಎಂದು ನ್ಯಾಯಾಧೀಶ ಹಿದಾಯತ್ ಉಲ್ಲ ಶರೀಫ್ ಹೇಳಿದರು.
ಜಿಲ್ಲಾ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯಲ್ಲಿ ಮಾತನಾಡಿದರು.ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಮಹಾಸ್ವಾಮಿ ಮಾತನಾಡಿ, ಹಾಸನ ಜಿಲ್ಲಾ ವಕೀಲರ ಸಂಘದಲ್ಲಿ ಮಾದರಿಯಾಗಿ ಕೆಂಪೇಗೌಡ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಲ್ಲಿ ವಕೀಲರು ವಿದ್ಯಾರ್ಥಿಗಳಂತೆ ವೇದಿಕೆ ಮುಂಭಾಗ ಕೂತು ಕೆಂಪೇಗೌಡರ ಆದರ್ಶಗಳನ್ನು ನೆನೆಯುತ್ತಿರುವುದು ತುಂಬಾ ಖುಷಿಯ ವಿಚಾರ. ವಕೀಲರು ಮತ್ತು ನ್ಯಾಯಾಧೀಶರು ಒಟ್ಟಿಗೆ ಕೆಂಪೇಗೌಡರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ ಮಾತನಾಡಿ, ಒಕ್ಕಲಿಗರು ಈ ಭೂಮಿ ತಾಯಿಯ ಚೊಚ್ಚಲ ಮಕ್ಕಳು ಬೇಂದ್ರೆ ಹೇಳಿದ್ದಾರೆ. ಕುವೆಂಪುರವರು ಒಕ್ಕಲಿಗರನ್ನು ಈ ಭೂಮಿಯ ಯೋಗಿಗಳು ಎಂದು ಕರೆದಿದ್ದಾರೆ. ಈಗ ರೈತರನ್ನು ಮರೆತು ಜೀವನ ಮಾಡುತ್ತಿದ್ದೇವೆ. ಎಂದೆಂದಿಗೂ ರೈತರನ್ನು ನೆನೆಯಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ಡಿ.ಟಿ.ಪ್ರಸನ್ನ ಮಾತನಾಡಿ, ‘ಕೆಂಪೇಗೌಡ ಜಯಂತಿಯನ್ನು ನಮ್ಮ ಸಂಘದ ಸದಸ್ಯರು ತುಂಬಾ ಒಮ್ಮತದಿಂದ ಆಚರಿಸಿದ್ದೇವೆ. ಕೆಂಪೇಗೌಡರ ಜೀವನ ಚರಿತ್ರೆ ನಮಗೆ ಆದರ್ಶವಾಗಿದೆ. ಅವರ ಹೋರಾಟ ಬದುಕು ಇಂದಿನ ಯುವಕರಿಗೆ ದಾರಿದೀಪವಾಗಿದೆ’ ಎಂದು ಸಲಹೆ ನೀಡಿದರು.
ಮೊದಲಿಗೆ ಶಂಬುನಾಥ ಮಹಾಸ್ವಾಮಿಗಳನ್ನು ಪೂರ್ಣ ಕಂಬ ಸ್ವಾಗತದೊಂದಿಗೆ ಬರಮಾಡಿಕೊಂಡು ಸಂಘದ ಗಣಪತಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ನಂತರ ವೇದಿಕೆಯಲ್ಲಿ ವಿದ್ಯುಕ್ತವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮೂರು ಜನ ಪ್ರಗತಿಪರ ಯುವ ರೈತರಿಗೆ ಸನ್ಮಾನ ಮಾಡಿದರು.