ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಜನಾದ್ರಿ ಅಭಿವೃದ್ಧಿ: ಗಾಲಿ ಜನಾರ್ದನ ರೆಡ್ಡಿ

KannadaprabhaNewsNetwork | Published : Mar 13, 2024 2:01 AM

ಸಾರಾಂಶ

ಅಂತಾರಾಷ್ಟ್ರಿಯ ಮಟ್ಟದಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸಲಾಗುವುದು.

ಆನೆಗೊಂದಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಶಾಸಕ ಹೇಳಿಕೆ

ಕನ್ನಡಪ್ರಭ ವಾರ್ತೆ ಗಂಗಾವತಿ

ಅಂತಾರಾಷ್ಟ್ರಿಯ ಮಟ್ಟದಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರಡ್ಡಿ ಹೇಳಿದರು.

ತಾಲೂಕಿನ ಆನೆಗೊಂದಿಯ ಆನೆಗೊಂದಿ ಉತ್ಸವ ಸಮಾರೋಪ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಆಂಜನೇಯಸ್ವಾಮಿ ಹುಟ್ಟಿದ ಈ ಸ್ಥಳ ಅಂಜನಾದ್ರಿಯಾಗಿದ್ದು, ಈ ಪ್ರದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಸಾವಿರಾರು ಕೋಟಿ ರು ಅನುದಾನ ತರುತ್ತೇನೆ. 70 ಎಕರೆ ಭೂಮಿ ಪಡೆದು ಅಂಜನಾದ್ರಿ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

ನನ್ನ ಧರ್ಮ ಪತ್ನಿ ಲಕ್ಷ್ಮಿ ಅರುಣಾ ಬೆಂಬದಿಂದ ಮತ್ತೆ ರಾಜಕೀಯಕ್ಕೆ ಬರಬೇಕಾಯಿತು.

ಶತ್ರುಗಳು ಹಾಗೂ ಯಾರೋ ಮಾಡಿದ ಸಂಚಿನಿಂದಾಗಿ ಬಳ್ಳಾರಿಯಿಂದ ದೂರ ಇರಬೇಕಾಯಿತು. 12 ವರ್ಷ ರಾಜಕೀಯದಿಂದ ದೂರ ಇದ್ದೇ ನಂತರ ರಾಜಕೀಯಕ್ಕೆ ಬರಲೇಬೇಕಾಯಿತು ಎಂದರು.

ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿ, ವೇದಿಕೆಗೆ ನನ್ನ ಪತಿ ಶ್ರೀರಂಗದೇವರಾಯಲು ಅವರ ಹೆಸರು ಇಟ್ಟಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಉತ್ಸದ ಅಂಗವಾಗಿ ಎರಡು ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಉತ್ಸವ ಯಶಸ್ವಿಗೆ ಎಲ್ಲರೂ ಸಹಕಾರ ನೀಡಿದ್ದಾರೆ. ಸಚಿವರು, ಶಾಸಕರು ಮುತುವರ್ಜಿ ವಹಿಸಿದ್ದಾರೆ. ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಜೊತೆಗೆ ಗಗನ ಮಹಲ್ ಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.

ಜಿಲ್ಲಾಡಳಿತದಿಂದ ಅಂಜನಾದ್ರಿ ಪ್ರದೇಶದ ಅಭಿವೃದ್ಧಿ, ಇತಿಹಾಸದ ಕುರಿತು ವಿಡಿಯೋ ಮಾಡಿ ಬಿಡುಗಡೆ ಮಾಡಲಾಗುವುದು. ಉತ್ಸವ ಯಶಸ್ವಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಶ್ರಮಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಆನೆಗೊಂದಿ ಐತಿಹಾಸಿಕ ಪ್ರದೇಶವಾಗಿದೆ. ಬೇರೆ ಕೆಲ ರಾಜ್ಯಗಳಲ್ಲಿ ಇಂತಹ ಐತಿಹಾಸಿಕ ಸ್ಥಳಗಳು ಇಲ್ಲ. ಆನೆಗೊಂದಿ ಪ್ರದೇಶದ ಬಗ್ಗೆ ಇಂದಿನ ಜನಾಂಗಕ್ಕೆ ತಿಳಿಸಬೇಕಾಗಿದೆ. ಶ್ರೀಕೃಷ್ಣದೇವರಾಯನ ವಂಶಸ್ಥರು ಇಲ್ಲಿದ್ದಾರೆ. ಅವರ ಕಲಕುಶಲ ವಸ್ತುಗಳು ಸೇರಿದಂತೆ ಹಳೇಕಾಲದ ವಸ್ತ್ರಗಳನ್ನು ನಾವಿಲ್ಲಿ ಕಾಣಬಹುದಾಗಿದೆ ಎಂದರು.

ಎಸ್.ಪಿ. ಯಶೋದಾ ವಂಟಿಗೋಡಿ ಮಾತನಾಡಿ, ಶಾಸಕರು ಮುತುವರ್ಜಿ ವಹಿಸಿ ಆನೆಗೊಂದಿ ಉತ್ಸವ ಯಶಸ್ವಿ ಮಾಡಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಆನೆಗೊಂದಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪೂರ್ಣಿಮಾ, ಎಸಿ ಕ್ಯಾ. ಮಹೇಶ ಮಾಲಗಿತ್ತಿ ಸೇರಿದಂತೆ ಇತರರಿದ್ದರು.

Share this article