₹27.5 ಕೋಟಿ ವೆಚ್ಚದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ: ಎಚ್.ಡಿ.ತಮ್ಮಯ್ಯ

KannadaprabhaNewsNetwork |  
Published : Oct 25, 2025, 01:00 AM IST
ಚಿಕ್ಕಮಗಳೂರು ನಗರದ ವಿವಿಧ ಬಡಾವಣೆಗಳಿಗೆ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಶುಕ್ರವಾರ ಬೆಳಿಗ್ಗೆ ಸೈಕಲ್‌ನಲ್ಲಿ ತೆರಳಿ ಸಮಸ್ಯೆಗಳನ್ನು ಆಲಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮಳೆಯಿಂದಾಗಿ ಹದಗೆಟ್ಟಿರುವ ನಗರದ ರಸ್ತೆಗಳ ಅಭಿವೃದ್ಧಿಗೆ ₹27.5 ಕೋಟಿಯನ್ನು ರಾಜ್ಯ ಸರ್ಕಾರ ದಿಂದ ಒದಗಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ನಿಮ್ಮ ಮನೆ ಬಾಗಿಲಿಗೆ ನಿಮ್ಮ ಶಾಸಕ । ಸೈಕಲ್‌ನಲ್ಲಿ ವಿವಿಧ ಬಡಾವಣೆಗಳಿಗೆ ಭೇಟಿ । ಸಮಸ್ಯೆಗಳನ್ನು ಆಲಿಸಿದ ಶಾಸಕ ತಮ್ಮಯ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಳೆಯಿಂದಾಗಿ ಹದಗೆಟ್ಟಿರುವ ನಗರದ ರಸ್ತೆಗಳ ಅಭಿವೃದ್ಧಿಗೆ ₹27.5 ಕೋಟಿಯನ್ನು ರಾಜ್ಯ ಸರ್ಕಾರ ದಿಂದ ಒದಗಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್, ಮಲ್ಲಂದೂರು ರಸ್ತೆ, ವಿಜಯಪುರ ಹಾಗೂ ಹನುಮಂತಪ್ಪ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಹಾಗೂ ಈ ವರ್ಷ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆಗಳು ಹೆಚ್ಚಾಗಿ ಗುಂಡಿ ಬಿದ್ದಿವೆ. ಜೊತೆಗೆ ಯುಜಿಡಿ ಹಾಗೂ ಅಮೃತ್ ಯೋಜನೆ ಕಾಮಗಾರಿಗಳಿಂದ ಕೂಡ ರಸ್ತೆಗಳು ಹಾನಿಗೊಳಗಾಗಿವೆ ಎಂಬ ದೂರುಗಳೂ ಕೇಳಿ ಬಂದಿವೆ ಎಂದರು. ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರನ್ನು ತಾವು ಭೇಟಿ ಮಾಡಿ ಕೋರಿಕೆ ಸಲ್ಲಿಸಿದ ಮೇರೆಗೆ ನಗರಸಭೆಗೆ ವಿಶೇಷ ಅನುದಾನ ಒದಗಿಸಿದ್ದಾರೆ. ಎಸ್‌ಎಫ್‌ಸಿ ಯೋಜನೆಯಡಿ ₹10 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ನಿರ್ವಹಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ವಿಶೇಷ ಅನುದಾನದಲ್ಲೂ ಸಹ ₹12.5 ಕೋಟಿ ಗಳನ್ನು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಇಲಾಖೆಯಿಂದ ₹5 ಕೋಟಿ ಗಳನ್ನು ಒದಗಿಸಿದ್ದು, ಒಟ್ಟು ₹27.5 ಕೋಟಿ ಲಭ್ಯವಿದ್ದು, ಈ ಮೊತ್ತವನ್ನು ವಿನಿಯೋಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸತತ ಮಳೆಯಿಂದ ರಸ್ತೆಗಳ ಹಾನಿ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಮಸ್ಯೆ ಗಳಿಗೆ ಸ್ಪಂದಿಸುವ ಸಲುವಾಗಿ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ ಅವರು, ಇದೇ ರೀತಿ ಪ್ರತೀ ತಿಂಗಳಿಗೊಮ್ಮೆ ಬಡಾವಣೆಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಗಮನ ಹರಿಸಲು ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದಿಂದ ಸ್ಪಂದಿಸುವ ಕಾರ್ಯವೂ ಇದರ ಜೊತೆಯಲ್ಲಿ ನಡೆಯಲಿದೆ. ಪರಿಸರ ಹಾಗೂ ಸ್ವಚ್ಛತೆ ಬಗ್ಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸಬೇಕೆಂಬ ಬಗ್ಗೆ ಅರಿವು ಮೂಡಿಸಲು ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡಿರುವುದಾಗಿ ತಿಳಿಸಿದರು. ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್ ಬಳಿ ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ ಪರಿಸರವಾದಿ ಸ.ಗಿರಿಜಾಶಂಕರ ಮಾತನಾಡಿ, ‘ಸೈಕಲ್ ತುಳಿ, ಪರಿಸರ ತಿಳಿ’ ಕಾರ್ಯಕ್ರಮದಿಂದ ಗುಂಡಿಮಯ ರಸ್ತೆಗಳು, ಚರಂಡಿಗಳು ಸೇರಿದಂತೆ ವಿವಿಧ ಸಮಸ್ಯೆಗಳು ಗೋಚರ ವಾಗುತ್ತವೆ. ಈ ಪರಿಕಲ್ಪನೆ ಉತ್ತಮವಾಗಿದೆ ಎಂದು ಶ್ಲಾಘಿಸಿದರು. ಮಧುವನ ಬಡಾವಣೆಯಲ್ಲಿ ಎರಡು ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕಿದೆ. ಈಗಾಗಲೇ ಸೌರ ದೀಪಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತೀ ವರ್ಷ ಕಳೆ ಕೀಳುವ ಕೆಲಸ ಬಡಾವಣೆ ನಿವಾಸಿಗಳಿಂದಲೇ ನಡೆಯುತ್ತಿದೆ. ಇಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ದೊಡ್ಡ ಕಾಲುವೆ ಯಿಂದ ಕಳೆ ತೆರವುಗೊಳಿಸದೆ ಅದರಿಂದಾಗಿಯೇ ಬಹಳಷ್ಟು ಕಾಯಿಲೆಗಳಿಗೆ, ಸೊಳ್ಳೆ ಕಾಟಕ್ಕೆ ಕಾರಣ ವಾಗುತ್ತಿದೆ. ಕಸ ಎಸೆಯಲು ಕೂಡ ಬಳಕೆಯಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಈ ಕಾಲುವೆಯನ್ನು ಸುವ್ಯವಸ್ಥಿತಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಬಡಾವಣೆಯಲ್ಲಿ ಆಗಿಂದಾಗ್ಗೆ ವಿದ್ಯುತ್ ನಿಲುಗಡೆ ಯಾಗುತ್ತಿದೆ. ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ ಅವರು ಕಾರಣವನ್ನೇ ನೀಡುತ್ತಿಲ್ಲ. ಮೆಸ್ಕಾಂನವರು ವರ್ಷಕ್ಕೆ ಎರಡು ಬಾರಿಯಾದರೂ ಗ್ರಾಹಕರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸುವುದು ಸೂಕ್ತ. ಆಗ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಮೆಸ್ಕಾಂ ಗ್ರಾಹಕ ಸ್ನೇಹಿಯಾಗಿ ಸ್ಪಂದಿಸುತ್ತಿಲ್ಲ. ಬಿಲ್ ಪಾವತಿಸದಿದ್ದರೆ ಸಂಪರ್ಕ ಸ್ಥಗಿತಗೊಳಿಸಲು ಮಾತ್ರ ಬರುತ್ತಿದ್ದಾರೆ ಎಂದು ಆರೋಪಿಸಿದರು. ಸಾರ್ವಜನಿಕ ಇಲಾಖೆಗಳಲ್ಲಿ ಜನರಿಗೆ ಸ್ಪಂದಿಸುವ ಕಾರ್ಯ ನಡೆಯಬೇಕಿದೆ. ನಗರಸಭೆಯಿಂದ ವಾರಕ್ಕೆರಡು ಬಾರಿಯಾದರೂ ಕಸ ಗುಡಿಸುವ ಕಾರ್ಯ ನಡೆಯಬೇಕು. ಚರಂಡಿಗಳನ್ನು ಸುಸ್ಥಿತಿ ಗೊಳಿಸುವ ಕೆಲಸ ಮಾಡಬೇಕಿದೆ. ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಗಮನ ಸೆಳೆದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಮಧುವನ ಬಡಾವಣೆಯಲ್ಲಿ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಚರಂಡಿಗಳನ್ನು ಸುಸ್ಥಿತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಶಾದಾಬ್ ಆಲಂಖಾನ್, ಲಕ್ಷ್ಮಣ್, ಸಿಡಿಎ ಅಧ್ಯಕ್ಷ ನಯಾಜ್ ಅಹಮ್ಮದ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲೂಕು ಸಮಿತಿ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಸಿಡಿಎ ಆಯುಕ್ತೆ ನಾಗರತ್ನ, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಪೌರಾಯುಕ್ತ ಬಿ.ಸಿ. ಬಸವರಾಜು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. 24 ಕೆಸಿಕೆಎಂ 3ಚಿಕ್ಕಮಗಳೂರು ನಗರದ ವಿವಿಧ ಬಡಾವಣೆಗಳಿಗೆ ಶಾಸಕ ಎಚ್‌.ಡಿ. ತಮ್ಮಯ್ಯ ಶುಕ್ರವಾರ ಬೆಳಿಗ್ಗೆ ಸೈಕಲ್‌ನಲ್ಲಿ ತೆರಳಿ ಸಮಸ್ಯೆಗಳನ್ನು ಆಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ