ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ₹30 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ ಆಗುತ್ತೆ ಎಂಬ ವಿರೋಧಿಗಳ ಮಾತು ಸುಳ್ಳಾಗಿಸುವ ಮೂಲಕ ಕ್ಷೇತ್ರಗಳ ಅಭಿವೃದ್ಧಿ ಕೂಡ ಸರ್ಕಾರದಿಂದ ಮಾಡಲಾಗುತ್ತಿದೆ ಎಂದು ಶಾಸಕ ಕೆ. ಎಸ್. ಆನಂದ್ ಹೇಳಿದರು.
ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ₹30 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಗ್ರಾಮದಲ್ಲಿ ಬಾಬು ಜಗಜೀವನ್ ರಾಮ್ ಕಟ್ಟಡದ ಕಾಮಗಾರಿ ಮುಗಿದಿದ್ದು, ಕುರುಬಗೆರೆ ಗ್ರಾಮದ ಶ್ರೀ ಬೀರದೇವರ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಸರ್ಕಾರದಿಂದ ಮಾಡುವ ಸಮುದಾಯ ಭವನಗಳ ಉದ್ಘಾಟನೆಯಾದರೆ ಬಡ ವರ್ಗದವರು ಶುಭ ಸಮಾರಂಭ ಮಾಡಲು ಅನುಕೂಲವಾಗಲಿದೆ ಎಂದರು.ಪಟ್ಟಣಗೆರೆ ಶ್ರೀಕಟ್ಟೆ ಹೊಳೆಯಮ್ಮ ದೇವಸ್ಥಾನದ ಭವನ ನಿರ್ಮಾಣಕ್ಕೆ ₹50 ಲಕ್ಷ ನೀಡುವ ಮೂಲಕ ಕಾಮಗಾರಿ ಪ್ರಗತಿಯಲ್ಲಿದೆ. ಹಂತ ಹಂತವಾಗಿ ಪಟ್ಟಣಗೆರೆ ಗ್ರಾಮದ ಅಭಿವೃದ್ಧಿ ಕೆಲಸ ಮಾಡಲಾಗುವುದು. ಬಹು ಮುಖ್ಯವಾಗಿ ಬಡವರ ಬದುಕಿಗಾಗಿ ಗ್ಯಾರೆಂಟಿಗಳಿಂದ ಬಡವರನ್ನು ಸ್ವಾವಲಂಬಿ ಮಾಡುವಲ್ಲಿ ಕಾಂಗ್ರೆಸ್ ಸರಕಾರ ಯಶಸ್ವಿಯಾಗಿದೆ ಎಂದು ಹೇಳಿದರು.
ಮುಂದಿನ ತಮ್ಮ ಮೂರು ವರ್ಷದ ಶಾಸಕರ ಅವಧಿಯಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇರುವ ಎಲ್ಲ ಅವಕಾಶಗಳು ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ದುಡಿಯುತ್ತೇನೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿಗಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿಯನ್ನು ನಗದಿಯತ್ ಕಾವಲಿನಲ್ಲಿ ಆರಂಭಿಸಲಾಗುತ್ತಿದೆ. ಇದರಿಂದ ನಮ್ಮ ಕ್ಷೇತ್ರದ 5 ಸಾವಿರ ಹೆಣ್ಣು ಮಕ್ಕಳಿಗೆ ಐದಾರು ತಿಂಗಳಲ್ಲಿ ಉದ್ಯೋಗಾವಕಾಶ ಸಿಗಲಿದೆ. ಯುವಕರಿಗೂ ಉದ್ಯೋಗ ನೀಡುವ ಕಂಪನಿಗಳನ್ನು ತಂದು ಕೆಲಸ ದೊರಕಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಶ್ರೀ ಕಟ್ಟೆಹೊಳೆಯಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ದೇವಾಲಯದ ಸಮುದಾಯ ಭವನಕ್ಕೆ ಶಾಸಕರು ₹50 ಲಕ್ಷ ಅನುದಾನ ನೀಡಿದ್ದು ಕಾಮಗಾರಿ ಆರಂಭವಾಗಿದೆ. ಶಾಸಕರ ಪ್ರಮುಖ ಆಶಯವಾದ ನೀರಾವರಿ ಯೋಜಯ ಜಾರಿಗೆ ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದರು.
ಕುರುಬಗೆರೆ ಲೋಕೇಶ್ ಮಾತನಾಡಿ, ಸ್ಮಶಾನಕ್ಕೆ ತೆರಳುವ ಹಾಗು ಅಗತ್ಯವಾದ 2 ರಸ್ತೆಗಳ ನಿರ್ಮಾಣಕ್ಕೆ ಶಾಸಕರು ಅನುದಾನ ನೀಡಿದ್ದಾರೆ. 25 ವರ್ಷಗಳ ಬಳಿಕ ಗ್ರಾಮದ ಕೆರೆ ತುಂಬಿದ್ದು ಕೆರೆ ರಸ್ತೆ ಅಭಿವೃದ್ಧಿಪಡಿಸಿಕೊಡಿ ಎಂದು ಶಾಸಕರಿಗೆ ಮನವಿ ಮಾಡಿದರು.
11ಕೆಕೆಡಿಯು1.