ಕನ್ನಡಪ್ರಭ ವಾರ್ತೆ ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸರ್ಕಾರಕ್ಕೆ 100 ದಿನಗಳು ತುಂಬಿದ ಸಂಭ್ರಮದ ಹಿನ್ನೆಲೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು, ಮೊಟ್ಟೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಮೇಕೆ ಮತ್ತು ಕುರಿ ಸಾಕಾಣಿಕೆಯನ್ನು ಒಳಗೊಂಡ ಪ್ರೊಟೀನ್ ಕ್ಲಸ್ಟರ್ ಯೋಜನೆಯ ಅಡಿ ಚಾಮರಾಜನಗರ, ಚಿತ್ರದುರ್ಗ, ಹಾವೇರಿ ಮತ್ತು ಕೊಪ್ಪಳದಲ್ಲಿ ನಾಲ್ಕು ಪ್ರೊಟೀನ್ ಪಾರ್ಕ್ ಅಭಿವೃದ್ಧಿಗೆ ಸೂಚಿಸಲಾಗಿದೆ. ಆದಷ್ಟು ಬೇಗ ಅನುಷ್ಠಾನಕ್ಕೆ ಕ್ರಮ ವಹಿಸಿ. ರಾಜ್ಯಾದ್ಯಂತ ಪ್ರೊಟೀನ್ ಯುಕ್ತ ಆಹಾರ ಕಡಿಮೆ ದರದಲ್ಲಿ ಲಭ್ಯ ಆಗುವಂತೆ ವ್ಯವಸ್ಥೆ ಕೈಗೊಳ್ಳಲು ಜಾನುವಾರು ಮತ್ತು ಕುಕ್ಕುಟ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೃಷಿ, ತೋಟಗಾರಿಕೆ ರಫ್ತು ಉತ್ತೇಜನ:ಮಾರ್ಚ್ 2027ರ ಅಂತ್ಯದೊಳಗೆ 2000 ರೈತರಿಗೆ ರಫ್ತುದಾರರಾಗಲು ತರಬೇತಿ, ಪ್ರಮಾಣೀಕರಣದ ಬಗ್ಗೆ ಮಾರ್ಗದರ್ಶನ ನೀಡಿ ಸಿದ್ಧಗೊಳಿಸುವ ಗುರಿ ಸಾಧನೆಗೆ ಅಗತ್ಯ ಕ್ರಮ ವಹಿಸಿದೆ. ಸಮೂಹ ಕೃಷಿ ಕೈಗೊಳ್ಳಲು ರೈತರನ್ನು ಉತ್ತೇಜಿಸಬೇಕು ಹಾಗೂ ವೈಜ್ಞಾನಿಕ ಸಂಸ್ಕರಣೆ ಮತ್ತು ಸಂಗ್ರಹಣೆಗೆ ಮಾರ್ಗದರ್ಶನ ನೀಡಬೇಕು. ರಾಜ್ಯದಲ್ಲಿ ಪುಷ್ಪೋದ್ಯಮಕ್ಕೆ ಉತ್ತೇಜನ ನೀಡಲು ಈಗಾಗಲೇ ಸೂಚಿಸಲಾಗಿದೆ. ಬೃಹತ್ ಹೂವಿನ ಮಾರುಕಟ್ಟೆಗೆ ಕನಿಷ್ಠ 5 ಎಕರೆ ಸ್ಥಳ ಗುರುತಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಆಸಕ್ತಿ, ಪ್ರಾಯೋಗಿಕ ಮಾಹಿತಿ ಒದಗಿಸುವ ದೃಷ್ಟಿಯಿಂದ ‘ಗ್ರಾಮಾನುಭವ’ ಯೋಜನೆಯನ್ನು ಖಾಸಗಿ ಶಾಲೆಗಳೂ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ರಾಜ್ಯ ಸರ್ಕಾರ ಮುಂದಿನ ಮೂರು ವರ್ಷಗಳಲ್ಲಿ ಕಾರ್ಪೊರೇಟರ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಸ್‌ಆರ್) ಹಾಗೂ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನಡಿ 1000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಅಭಿವದ್ಧಿಪಡಿಸುವ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಅವರು ಸಭೆಯಲ್ಲಿ ಹೇಳಿದ್ದಾರೆ. ಡಿಸಿಗಳಿಗೇ ಕೆಪಿಎಸ್ ಶಾಲೆಗಳ ಡಿಪಿಆರ್ ಅನುಮೋದನೆ, ಟೆಂಡರ್ ಕರೆಯಲು ಅನುಮೋದನೆ ನೀಡುವ ಮೂಲಕ ಅನುಷ್ಠಾನ ಪ್ರಕ್ರಿಯೆ ಸರಳಗೊಳಿಸಲಾಗಿದೆ. ನ.14 ರೊಳಗೆ ಶಾಲೆಗಳ ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಆರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ(ಎಐ) ತರಬೇತಿ ಆರಂಭಿಸಲು ಮುಖ್ಯಮಂತ್ರಿ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದ್ದಾರೆ.
ಇದನ್ನು, ಎಐ ವಿವಿ ಸ್ಥಾಪನೆಗೆ ಜಾಗ ಗುರುತಿಸಲು ಸೂಚಿಸಲಾಗಿದ್ದು, 956 ಶಿಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಇದೇ ವೇಳೆ ಅಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದ್ದಾರೆ.