ಕನ್ನಡಪ್ರಭ ವಾರ್ತೆ, ಬೀದರ್
2024ರ ಮಾರ್ಚ್ 7ರಂದು ದೇವಾಲಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆಯಡಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹22.41 ಕೋಟಿಗಳ ಅನುದಾನ ಮಂಜೂರಾಗಿದ್ದು, ಈ ಕಾಮಗಾರಿಗಳಿಗೆ ಶನಿವಾರ ಬೆಳಗ್ಗೆ ಕಾಂಗ್ರೆಸ್ ಸಂಸದ ಸಾಗರ ಖಂಡ್ರೆ ಹಾಗೂ ಸಚಿವ ಈಶ್ವರ ಖಂಡ್ರೆ ಅವರು ಚಾಲನೆ ನೀಡಿದರು.
ಆದರೆ, ಈಗಾಗಲೇ ಪ್ರಧಾನಿಯಿಂದ ಶಂಕುಸ್ಥಾಪನೆ ನೆರವೇರಿದ ಕಾಮಗಾರಿಗಳಿಗೆ ಮತ್ತೆ ಚಾಲನೆ ನೀಡುವ ಸಚಿವರ ಕ್ರಮಕ್ಕೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನಾರ್ಥವಾಗಿ ಕಾರ್ಯಕ್ರಮಕ್ಕೂ ಮೊದಲು ಇಲ್ಲಿನ ಲಿಂಗಕ್ಕೆ ಪೂಜೆ ಸಲ್ಲಿಸಲು ಮುಂದಾದರು. ಬೆಳಗ್ಗೆ 9 ಗಂಟೆಗೆ ಮಾಜಿ ಸಂಸದ ಭಗವಂತ ಖೂಬಾ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಮುಖಂಡರು ದೇವಾಯದ ಆವರಣಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ, ದೇವಸ್ಥಾನದ ಮುಖ್ಯದ್ವಾರದಲ್ಲಿಯೇ ಬ್ಯಾರಿಕೇಡ್ ಹಾಕಿ ಪೊಲೀಸರು ಅವರನ್ನು ತಡೆದರು.ಈ ವೇಳೆ, ಬಿಜೆಪಿ ನಾಯಕರು ಮುಖ್ಯಗೇಟ್‌ನ ಕಮಾನಿನ ಬಳಿ ಧರಣಿ ನಡೆಸಿದರು. ಇದರಿಂದಾಗಿ ಬೀದರ್-ಭಾಲ್ಕಿ ರಸ್ತೆಯಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಪರಿಸ್ಥಿತಿ ತ್ವೇಷಮಯವಾಗಿದ್ದರಿಂದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ನಗರದ ಸಿದ್ಧಾರೂಢ ಗುಂಪಾದಲ್ಲಿ ಕರೆದೊಯ್ದುಬಿಟ್ಟರು.ಪವಿತ್ರ ಕೆಲಸದಲ್ಲಿ ರಾಜಕೀಯ ಬೇಡ:
ಬಳಿಕ, ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಪಾಪನಾಶ ದೇವಾಲಯ ಅಭಿವೃದ್ಧಿಯಾಗಬೇಕು ಎನ್ನುವುದು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿತ್ತು. ಅದು ಸಂಸದ ಸಾಗರ ಖಂಡ್ರೆ ಅವರ ಸತತ ಪ್ರಯತ್ನದಿಂದ ಈಡೇರಿದೆ. ಪವಿತ್ರ ಕೆಲಸದಲ್ಲಿ ರಾಜಕೀಯ ಬೇಡ. ಕೆಲಸ ಮಾಡಿದವರ ಹೆಸರು ಉಳಿಯುತ್ತೆ, ಕೆಲಸ ಮಾಡದವರನ್ನು ಈಗಾಗಲೇ ಮನೆಯಲ್ಲಿ ಕೂಡಿಸಿದ್ದಾರೆ ಎಂದು ಭಗವಂತ ಖೂಬಾ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.2024ರ ಮಾರ್ಚ್‌ನಲ್ಲಿ ಈ ಕಾಮಗಾರಿ ಘೋಷಣೆಯಾಗಿ ಪ್ರಧಾನಿಯವರಿಂದ ಕೇವಲ ವರ್ಚುವಲ್ ಮೂಲಕ ಶಂಕುಸ್ಥಾಪನೆಯಾಗಿತ್ತು. ಆದರೆ ಯಾವುದೇ ಪ್ರಗತಿಯಾಗಿರಲಿಲ್ಲ. ಸಾಗರ ಖಂಡ್ರೆ ಸಂಸದರಾದ ಮೇಲೆ ಕೇಂದ್ರ ಪ್ರವಾಸೋದ್ಯಮ ಸಚಿವರನ್ನುನಿರಂತರ ಭೇಟಿ ಮಾಡಿ ಹಣ ಮಂಜೂರಾತಿ ಮಾಡಿಸಿದ್ದಾರೆ. ನಂತರ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಆಗಿ ಈಗ ಕಾಮಗಾರಿ ಪ್ರಾರಂಭವಾಗುತ್ತಿದೆ. ಕಾಮಗಾರಿಯೂ 6 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.