ಹೊಸಕೋಟೆ: ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ರಸ್ತೆಗಳು ನಿರ್ಮಾಣವಾದರೆ, ಸಂಪರ್ಕ ಕ್ರಾಂತಿಯುಂಟಾಗಿ ದೇಶ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ಕ್ಷೇತ್ರ ಬೆಂಗಳೂರು ನಗರಕ್ಕೆ ಸನಿಹದಲ್ಲಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಗಳತೆ ದೂರದಲ್ಲಿದ್ದು, ವಿವಿಧ ಬಗೆಯ ಕೈಗಾರಿಕೆಗಳು ತಲೆ ಎತ್ತುತ್ತಿವೆ. ರಾಜ್ಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ರಸ್ತೆಗಳು ಅಭಿವೃದ್ಧಿಯಾದರೆ ನಗರೀಕರಣವಾಗಿ ವ್ಯಾಪಾರ ವಹಿವಾಟು ಹೆಚ್ಚುತ್ತವೆ. ಸ್ಥಳೀಯರಿಗೆ ಉದ್ಯೋಗಗಳು ಸೃಷ್ಟಿಯಾಗುತ್ತದೆ. ಜನರು ಆರ್ಥಿಕ ಸದೃಢರಾಗಲು ರಸ್ತೆಗಳ ಸಂಪರ್ಕ ಮುಖ್ಯ. ಈ ಭಾಗದ ರೈತರು ಬೆಳೆದ ಹೂವು, ಹಣ್ಣು, ತರಕಾರಿ, ಕಾಯಿ ಪಲ್ಯೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸೂಕ್ತ ರಸ್ತೆ ಸಂಪರ್ಕವಿಲ್ಲದೆ ಹೆಣಗಾಡುವಂತಾಗಿತ್ತು. ಇದೇ ರಸ್ತೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಸುಪ್ರಸಿದ್ದ ಧಾರ್ಮಿಕ ಕೇಂದ್ರಗಳು ನೆಲೆಸಿದೆ ಎಂದರು.ಇದೇ ವೇಳೆ ನಂದಗುಡಿ ಹೋಬಳಿಯ ಚಿಕ್ಕಕೊರಟಿ, ಸಿದ್ದನಹಳ್ಳಿ ಕಾರಹಳ್ಳಿ, ಅರೇಹಳ್ಳಿ, ದಳಸಗೆರೆ, ಚಿಕ್ಕೊಂಡಹಳ್ಳಿ, ಹಿಂಡಿಗನಾಳ ನೆಲವಾಗಿಲು, ಬೈಲನರಸಾಪುರ, ನಡುವಿನಪುರ, ಮೋತಕದಹಳ್ಳಿ, ಕಾಳಪ್ಪನಹಳ್ಳಿ, ಕೆ.ಸತ್ಯವಾರ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿ ಸಿಸಿ ರಸ್ತೆ ಹಾಗೂ ಡಾಂಬರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್.ರಾಜಶೇಖರ್, ಜಿಪಂ ಮಾಜಿ ಅಧ್ಯಕ್ಷೆ ಸವಿತಾಗೋಪಾಲ್, ನಿವೃತ್ತ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ, ಸದಸ್ಯರಾದ ಬೀರಪ್ಪ, ಮನ್ಸೂಆಲಿಖಾನ್, ಯುವ ಉದ್ಯಮಿ ಎಂ.ಸಂದೀಪ್ ಗೌಡ, ಟಿಎಪಿಸಿಎಂಎಸ್ ನಿರ್ದೇಶಕರಾದ ಎನ್.ಡಿ.ರಮೇಶ್, ಪಿ.ನಾರಾಯಣಪ್ಪ, ಎಸ್.ಪಿ ಕೃಷ್ಣಪ್ಪ, ಎಂಪಿಆರ್‌ಸಿಎಎಸ್‌ನ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ ಇತರರಿದ್ದರು.ಫೋಟೋ: 14 ಹೆಚ್‌ಎಸ್‌ಕೆ 2