ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ
ಕನ್ನಡಪ್ರಭ ವಾರ್ತೆ ಕಾರಟಗಿಕನಕಗಿರಿ ಕ್ಷೇತ್ರದಲ್ಲಿನ ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಎಲ್ಲ ಗ್ರಾಮೀಣ ರಸ್ತೆಗಳನ್ನು ಮೊದಲ ಅದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ನದಿಪಾತ್ರದ ನಂದಿಹಳ್ಳಿ ಹಾಗೂ ಕಕ್ಕರಗೋಳ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಂಗಳವಾರ ಮಾತನಾಡಿದರು.ಕಳೆದ ಐದು ವರ್ಷಗಳಲ್ಲಿ ಹಾಳಾಗಿ ಹೋಗಿರುವ ಕ್ಷೇತ್ರದ ಗ್ರಾಮೀಣ ರಸ್ತೆಗಳು ಮತ್ತು ಸೇತುವೆಗಳನ್ನು ಸುಮಾರು ₹೩೦೦ ಕೋಟಿ ಅನುದಾನದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ರಸ್ತೆಗಳು ಆರ್ಥಿಕ ಅಭಿವೃದ್ಧಿಯ ಸಾಧನಗಳು. ರಸ್ತೆಗಳು ಸರಿಯಾಗಿದ್ದಲ್ಲಿ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಆ ಕಾರಣಕ್ಕೆ ನಾನು ಈ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದೇನೆ ಎಂದರು.
ಕನಕಗಿರಿ ಕ್ಷೇತ್ರಕ್ಕೆ ಕೆಕೆಆರ್‌ಡಿಬಿಯಿಂದ ₹೧೬೫ ಕೋಟಿ ಅನುದಾನ ತಂದಿದ್ದೇನೆ. ಆ ಎಲ್ಲ ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.ಬೆನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ರಸ್ತೆಗಳಿಗೆ ಹೆಚ್ಚಿನ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಬೆನ್ನೂರು ಗ್ರಾಮದ ಮುಖ್ಯ ರಸ್ತೆ ಮೂಲಕ ಕೆಇಬಿ ರಸ್ತೆ ಮೂಲಕ ಬೂದುಗುಂಪಾ ರಸ್ತೆ ನಿರ್ಮಿಸಲು ₹೩ ಕೋಟಿ, ನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಜ್ಞಾನ ಪ್ರಯೋಗಾಲಯ ಹಾಗೂ ಕ್ರೀಡಾ ಸಾಮಗ್ರಿ ಗೆ ಖರೀದಿಗೆ ₹೬.೯೩ ಲಕ್ಷ, ಶಾಲೆಯ ವಿದ್ಯುತ್ ದುರಸ್ತಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ₹೨.೭೪ ಲಕ್ಷ, ನಂದಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ೨೦ ಕೊಠಡಿಗಳ ನಿರ್ಮಾಣಕ್ಕೆ ₹೧೫೭.೨೨ ಲಕ್ಷವನ್ನು ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕನಕಗಿರಿ ಕ್ಷೇತ್ರದ ಪ್ರತಿಯೊಂದು ಪ್ರಾಥಮಿಕ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ನ್ನು ಮಾಡುವುದಾಗಿ ತಿಳಿಸಿದರು.
ಬೆನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಬೆನ್ನೂರು ಗ್ರಾಮದಲ್ಲಿ ಮೂರು ರಸ್ತೆಗಳು, ಹೊಸ ಕಕ್ಕರಗೋಳ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಸ್ಥಳದಲ್ಲಿದ್ದ ಎಇಇ ವಿಜಯಕುಮಾರ್‌ಗೆ ಸೂಚಿಸಿದರು.ಈ ವೇಳೆ ಬೆನ್ನೂರು ಗ್ರಾಪಂ ಅಧ್ಯಕ್ಷ ಶರಣಪ್ಪ ಸಾಹುಕಾರ, ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ಬ್ಲಾಕ್ ಅಧ್ಯಕ್ಷ ಶರಣೆಗೌಡ ಮಾಲಿ ಪಾಟೀಲ್, ಮಾಜಿ ಅಧ್ಯಕ್ಷ ಅಂಬಣ್ಣ ನಾಯಕ, ಬಸವರಾಜ ಸಾಹುಕಾರ ಬೆನ್ನೂರು, ಡಾ. ಕೆ.ಎನ್. ಪಾಟೀಲ್, ಕೆ.ಸಿದ್ದನಗೌಡ, ಮಲ್ಲನಗೌಡ ಕಕ್ಕರಗೋಳ, ಶಿವಪುತ್ರಯ್ಯ ಸ್ವಾಮಿ ಬೆನ್ನೂರು ಸೇರಿ ಇತರರಿದ್ದರು.ಕಾಮಗಾರಿಗಳು:ಕೆಕೆಆರ್‌ಡಿಬಿ ಯೋಜನೆಯಲ್ಲಿ ನಂದಿಹಳ್ಳಿಯಲ್ಲಿ ₹೯೨.೮೨ ಲಕ್ಷ, ಕಕ್ಕರಗೊಳ ಗ್ರಾಮದಲ್ಲಿ ₹೮೪.೧೮ ಲಕ್ಷ, ಗುಂಡೂರು ಗ್ರಾಮದಲ್ಲಿ ₹೮೯.೩೭ ಲಕ್ಷ ಮತ್ತು ಡಾಕ್ಟರ್ ಕ್ಯಾಂಪ್‌ನಲ್ಲಿ ₹೩೯.೩೬ ಲಕ್ಷಗಳ ವಿವಿಧ ರಸ್ತೆ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ನಾಲ್ಕು ಗ್ರಾಮಗಳಿಗೆ ತೆರಳಿ ಸಚಿವರು ಭೂಮಿ ಪೂಜೆ ಮಾಡಿದರು.ಅಲೇದಾಡಿಸಬೇಡಿ:
ಜನರ ಕೆಲಸಗಳನ್ನು ತಕ್ಷಣ ಮಾಡಿಕೊಡಬೇಕು. ಅವರನ್ನು ಕಚೇರಿಗೆ ಅಲೆದಾಡಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಜನಸೇವೆ ಮಾಡುವುದಕ್ಕೆ ನೌಕರಿ ಇದೆ. ಅವರು ನಮಗೆ ಮತ್ತು ನಿಮಗೆ ಸಂಬಳ ನೀಡುತ್ತಾರೆ. ಅವರೇ ನಮಗೆ ದೇವರು ಅವರಿಗೆ ತೊಂದರೆ ನೀಡದೆ ಅವರ ಕೆಲಸ ಮಾಡಬೇಕು ಬೆನ್ನೂರು ಗ್ರಾಪಂ ಪಿಡಿಒ ಭಾಗ್ಯೇಶ್ವರಿ ಅವರಿಗೆ ಸಚಿವ ತಂಗಡಗಿ ಸೂಚಿಸಿದರು.ಗುಂಡೂರು ಪಿಡಿಒಗೆ ಹಿಗ್ಗಾ-ಮುಗ್ಗಾ ತರಾಟೆ:
ಗುಂಡೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನರು ಸಮಸ್ಯೆಗಳನ್ನು ಹೇಳಿಕೊಳ್ಳುವ ವೇಳೆ ಸ್ಥಳದಲ್ಲಿ ಇರದೆ ಜನರ ಸಮಸ್ಯೆಗಳನ್ನು ಬರೆದುಕೊಳ್ಳದೆ ಇದ್ದ ಪಿಡಿಒ ಸೈಯದ್‌ರನ್ನು ಸಚಿವ ಶಿವರಾಜ ತಂಗಡಗಿ ತರಾಟೆಗೆ ತೆಗೆದುಕೊಂಡರು. ನೀನೆನು ಡಿಸಿನಾ, ಸಿಇಒನಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸೈಯದ್ ನಾನು ಪಿಡಿಒ ಎಂದರು. ಮೊದಲು ನೀನು ಪೆನ್ನು, ಪೇಪರ್ ತೆಗೆದುಕೋ. ಜನರು ಹೇಳೋದನ್ನು ಬರೆದಿಕೋ. ಅದನ್ನು ಬಿಟ್ಟು ಕೈ ಬಿಸಿಕೊಂಡು ನಿಂತುಕೊಂಡರೇ ಆಗಲ್ಲ. ನಾನ್‌ಸೆನ್ಸ್ ಎಂದು ಕಟುವಾಗಿ ತರಾಟೆ ತೆಗೆದುಕೊಂಡರು. ನಿಮ್ಮಂಥ ಪಿಡಿಒಗಳು ಕೆಲಸ ಮಾಡದೇ ಇರೋದಕ್ಕೆ, ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.