ಯಲ್ಲಾಪುರ ಶಾಸಕರು ರಾಜೀನಾಮೆ ನೀಡಲಿ: ಕಾಗೇರಿ

KannadaprabhaNewsNetwork | Published : Jun 19, 2024 1:03 AM

ಸಾರಾಂಶ

ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷವನ್ನು ಬೆಂಬಲಿಸುವ ಇವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಂಸದ ಕಾಗೇರಿ ಆಗ್ರಹಿಸಿದರು.

ಯಲ್ಲಾಪುರ: ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಪ್ರಜಾಪ್ರಭುತ್ವದ ತತ್ವ ಸಿದ್ಧಾಂತದಡಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ ಎಂದು ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಜೂ. ೧೮ರಂದು ಪಟ್ಟಣದ ಅಡಿಕೆ ಭವನದಲ್ಲಿ ಬಿಜೆಪಿ ತಾಲೂಕು ಘಟಕ ಹಮ್ಮಿಕೊಂಡ ಅಭಿನಂದನಾ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಂ. ಭಾನುಪ್ರಕಾಶ ಅವರು ನಿಧನ ಹೊಂದಿದ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು. ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷವನ್ನು ಬೆಂಬಲಿಸುವ ಇವರು ತಕ್ಷಣ ರಾಜೀನಾಮೆ ನೀಡಬೇಕು. ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದರು.

ಈ ಚುನಾವಣೆ ನಮ್ಮ ಪಕ್ಷಕ್ಕೆ ವಿಶ್ವಾಸ ತಂದುಕೊಟ್ಟಿದೆ. ಪ್ರಜಾಪ್ರಭುತ್ವದ ಹಬ್ಬ. ಮೋದಿಯ ಬಗ್ಗೆ ಜನರಿಗಿರುವ ಸ್ವಯಂ ಸ್ಫೂರ್ತಿಯಿಂದ ಜನ ಬೆಂಬಲಿಸಿದರು. ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದ ಅವರು, ರಾಜ್ಯಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಲ್ಪಸಂಖ್ಯಾತರನ್ನು ಓಲೈಸುವುದರಲ್ಲೇ ನಿರತವಾಗಿದೆ. ₹1100 ಕೋಟಿ ಹಿಂದುಳಿದ ವರ್ಗದವರಿಗೆ ಕಾದಿರಿಸಿದ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ. ಕೊಲೆ, ಸುಲಿಗೆ ಮಿತಿ ಮೀರಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸರ್ಕಾರದ ಸ್ಥಿತಿಯನ್ನು ಮನಗಂಡರೆ ಸಿದ್ದು ಮತ್ತು ಡಿಕೆಶಿ ತಕ್ಷಣ ರಾಜೀನಾಮೆ ನೀಡಿ, ಪರಮೇಶ್ವರರಿಗೆ ಕೊಡಲಿ. ೫ ವರ್ಷ ಚುನಾವಣೆ ಬೇಡ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಮೋದಿ ಪ್ರಧಾನಿಯಾಗಿ ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ. ಮುಂದೆಯೂ ಎನ್‌ಡಿಎ ಬಂದು ಮೋದಿಯೇ ಪ್ರಧಾನಿಯಾಗಲಿದ್ದಾರೆ. ದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಹತ್ವ ನೀಡುತ್ತದೆ ಎಂದ ಅವರು, ಜನ ನಿರೀಕ್ಷಿಸಿದಂತೆ ಅಂಕೋಲಾ- ಹುಬ್ಬಳ್ಳಿ- ತಾಳಗುಪ್ಪ ರೈಲ್ವೆ, ಯಲ್ಲಾಪುರ ಬೈಪಾಸ್, ಸೀಬರ್ಡ್ ಸಮಸ್ಯೆ ಹೀಗೆ ಹಲವು ಸಮಸ್ಯೆಗಳಿವೆ. ಅವುಗಳನ್ನೆಲ್ಲ ಬಗೆಹರಿಸಲಾಗುವುದು. ಅರಣ್ಯ ಅತಿಕ್ರಮಣದಾರರು ಭಯಪಡುವ ಅಗತ್ಯವಿಲ್ಲ. ನಾನು ಸಂಸದನಾಗಿ ನಮ್ಮ ಪಕ್ಷದ ಶಾಸಕನಾಗಿಯೂ ನಿಮ್ಮ ಜತೆ ಇರುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅವರು, ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ ಅವರ ಕುರಿತು ನುಡಿನಮನ ಸಲ್ಲಿಸಿ, ಬಿಜೆಪಿಯವರು ಸ್ವಾಭಿಮಾನಿಗಳಾಗಿದ್ದಾರೆ. ಅದನ್ನು ಯಲ್ಲಾಪುರ ಶಾಸಕರು ಅರ್ಥೈಸಿಕೊಳ್ಳಬೇಕು. ಇದೊಂದೇ ಚುನಾವಣೆ ಅಲ್ಲ. ಶಾಸಕರ ಬಗ್ಗೆ ಯಾರಿಗೂ ಭಯ, ಆತಂಕ ಬೇಡ. ಸಂಸದರು, ಸಂಘಟನೆ ಜತೆಯಲ್ಲಿದೆ. ಈಗಿನಿಂದಲೇ ಮುಂಬರುವ ಚುನಾವನೆಯ ಸಿದ್ಧತೆ ಮಾಡಿಕೊಳ್ಳೋಣ. ಚುನಾವಣೆಯಲ್ಲಿ ವ್ಯಕ್ತಿ ಮುಖ್ಯವಲ್ಲ, ರಾಷ್ಟ್ರ, ಪಕ್ಷ ಮುಖ್ಯ. ಶಾಸಕರಿಗೆ ಏನೂ ಹೇಳಬೇಕಿಲ್ಲ. ೨ ಅವಧಿಗೆ ಜಿಲ್ಲಾಧ್ಯಕ್ಷರಾಗಿ, ೨ ಅವಧಿಗೆ ಬಿಜೆಪಿ ಶಾಸಕರಾಗಿ ಜನ ಆರಿಸಿದ್ದಾರೆ. ಎಲ್ಲ ಅರಿವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಅತ್ಯಧಿಕ ಅಂತರದ ಗೆಲುವಿಗೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಮತದಾರರು ಕಾರಣರಾಗಿದ್ದಾರೆ. ಅವರನ್ನು ಅಭಿನಂದಿಸುತ್ತೇವೆ ಎಂದರು.

ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ನಮಗೆ ಶಾಸಕರಿಲ್ಲದಂತಾಗಿದೆ. ಆದರೆ ಸಂಸದರು ನಮ್ಮ ಜತೆ ಇರುತ್ತೇನೆಂದು ಹೇಳಿದ್ದಾರೆ ಎಂದ ಅವರು, ಹಿರಿಯ ನಾಯಕ ಭಾನುಪ್ರಕಾಶ ಮತ್ತು ತಮ್ಮ ಸಂಬಂಧದ ಕುರಿತು ಮಾತನಾಡಿದರು.

ಪ್ರಮುಖರಾದ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಎಲ್.ಟಿ. ಪಾಟೀಲ, ರಾಮು ನಾಯ್ಕ, ಉಮೇಶ ಭಾಗ್ವತ, ಶ್ಯಾಮಿಲಿ ಪಾಟಣಕರ, ರೇಖಾ ಹೆಗಡೆ ಮಾತನಾಡಿದರು. ಪ್ರಮುಖರಾದ ಶಿವಯ್ಯ ಅಲ್ಲಯ್ಯನಮಠ, ಗೋಪಾಲಕೃಷ್ಣ ಗಾಂವ್ಕರ, ಶಿವಾನಿ ನರಸಾಣಿ, ರವಿ ಕೈಟ್ಕರ್, ಶ್ರುತಿ ಹೆಗಡೆ, ಸೋಮು ನಾಯ್ಕ, ಕಲ್ಪನಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್ ನಿರ್ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ ವಂದಿಸಿದರು.

Share this article