ಕನ್ನಡಪ್ರಭ ವಾರ್ತೆ ಮಡಿಕೇರಿ
ತೆರೆದ ಬಾವಿಗೆ ಬಿದ್ದು ಕಾಡಾನೆ ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ.ಸೋಮವಾರ ರಾತ್ರಿ 11 ಗಂಟೆ ಸಮಯದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತೆರೆದ ನಿರ್ಮಾಣ ಹಂತದಲ್ಲಿ ಇದ್ದ ಬಾವಿಗೆ ಆನೆ ಬಿದ್ದಿದೆ. ಪಾಲೇಂಗಡ ಬಿದ್ದಪ್ಪ ಶಂಭು ಎಂಬವರ ಮನೆ ಮುಂದೆ ಈ ಘಟನೆ ನಡೆದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆನೆಯ ಮೃತದೇಹ ಮೇಲೆತ್ತುವ ಕಾರ್ಯಾಚರಣೆ ನಡೆಸಿದ್ದಾರೆ.ಆಹಾರ ಅರಸಿಕೊಂಡು ಕಾಡಾನೆಗಳು ಕಾಳಿ ತೋಟಕ್ಕೆ ಲಗ್ಗೆ ಇಡುತ್ತಿದ್ದು, ವಿವಿಧ ಕಾರಣದಿಂದಾಗಿ ಆನೆಗಳು ಮೃತಪಡುತ್ತಿರುವುದು ಪ್ರಾಣಿಪ್ರಿಯರಲ್ಲಿ ಬೇಸರ ತರಿಸಿದೆ.
ಆಟೋ ಟಾರ್ಪಲ್ ಹರಿದು ಸ್ಪೀಕರ್ ಕಳವು:ಸುಂಟಿಕೊಪ್ಪ ಪಟ್ಟಣದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಗಳಿಂದ ಊಫರ್ (ಸ್ಪೀಕರ್) ಕಳವು ನಡೆಸಲಾಗುತ್ತಿದ್ದು, ಚಾಲಕರಿಗೆ ತಲೆನೋವಾಗಿ ಕಾಡುತ್ತಿದೆ.ಚಾಮುಂಡೇಶ್ವರಿ ಬಡಾವಣೆಯ ಸಚಿನ್ ಎಂಬವರು ಮನೆ ಸಮೀಪದ ದಾರಿಯಲ್ಲಿ ಸೋಮವಾರ ರಾತ್ರಿ 10 ಗಂಟೆಗೆ ಆಟೋರಿಕ್ಷಾ ನಿಲ್ಲಿಸಿ ಮನೆಗೆ ತೆರಳಿದ್ದಾರೆ. ಮಂಗಳವಾರ ಬೆಳಗ್ಗೆ ಆಟೋ ಹೊರತೆಗೆಯಲು ನೋಡುವಾಗ ಆಟೋದ ಟಾರ್ಪಲ್ ಹರಿದು ಆಟೋದ ಒಳಗಿದ್ದ 2 ಸ್ಪೀಕರ್ ಹಾಗೂ ಸ್ಟೀರಿಯೋ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಸೊತ್ತಿನ ಮೌಲ್ಯ ಸುಮಾರು 20 ಸಾವಿರ ರು. ಎನ್ನಲಾಗಿದೆ. ಈ ಬಗ್ಗೆ ಆಟೋ ಮಾಲಿಲೀಕ ಸಚಿನ್ ಸುಂಟಿಕೊಪ್ಪ ಠಾಣೆಗೆ ದೂರು ನೀಡಿದ್ದಾರೆ.ಕಳೆದ 4 ದಿನಗಳ ಹಿಂದೆಯಷ್ಟೇ ಪಾರ್ವತಮ್ಮ ಬಡಾವಣೆಯ ಗಣೇಶ ಎಂಬವವರ ಮನೆ ಸಮೀಪ ನಿಲ್ಲಿಸಿದ್ದ ಆಟೋರಿಕ್ಷಾದ ಹಿಂಭಾಗದ ಟಾರ್ಪಲ್ ಹರಿದುಹಾಕಿ ರಿಕ್ಷಾದಲ್ಲಿ ಅಳವಡಿಸಲಾಗಿದ್ದ ಸೌಂಡ್ ಬಾಕ್ಸ್ ಕಳ್ಳತನ ನಡೆಸಿದ್ದಾರೆ. ಈ ಬಗ್ಗೆಯೂ ಪೊಲೀಸ್ ದೂರು ದಾಖಲಾಗಿದೆ.