ಕನ್ನಡಪ್ರಭ ವಾರ್ತೆ ವಿಜಯಪುರ
ಉಪನೋಂದಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಆಸ್ತಿ ಪಂಚಾಯತಿ ಕಾರ್ಯದರ್ಶಿ ಹಾಗೂ ತಾಪಂ ಇಒ ಅವರ ಹೆಸರಿನಲ್ಲಿದ್ದರೂ ಉಪನೋಂದಣಾಧಿಕಾರಿಗಳು ಕೇವಲ ಪಿಡಿಒ ಸಹಿ ಒಂದರ ಮೇಲೆಯೇ ಆಸ್ತಿಯನ್ನು ವರ್ಗಾಯಿಸಿ ಕೊಟ್ಟಿದ್ದರು. ಪ್ರಾಥಮಿಕ ಹಂತದಲ್ಲಿ ಪಿಡಿಒ ರವೀಂದ್ರ ಕರಜಗಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉಪನೋಂದಣಾಧಿಕಾರಿ ಹಾಗೂ ಕಚೇರಿಯ ಸಿಬ್ಬಂದಿಗಳ ಮೇಲೂ ಕ್ರಮ ಆಗಬೇಕು ಎಂದು ಕನ್ನಡಪ್ರಭ ವರದಿಯಲ್ಲಿ ಒತ್ತಾಯಿಸಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ವರದಿ ಸಲ್ಲಿಕೆ:ಇಂಡಿ ತಾಲೂಕಿನ ಹಂಜಗಿ ಗ್ರಾಮದ ಸರ್ಕಾರಿ ಜಮೀನು ರಿ.ಸ.ನಂ.531/1 ಕ್ಷೇತ್ರದ ಪೈಕಿ 3-20 ಎಕರೆ ಜಮೀನು ನಿಯಮ ಬಾಹಿರವಾಗಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಇಂಡಿ ಉಪ ನೋಂದಣಾಧಿಕಾರಗಳ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಈ ಕುರಿತು ಇಂಡಿ ಉಪವಿಭಾಗಾಧಿಕಾರಿಗಳು, ಉಪನೊಂದಣಾಧಿಕಾರಿಗಳಿಗೆ ಏಪ್ರಿಲ್ 29ರಂದು ಪತ್ರ ಬರೆದು ವರದಿ ಸಲ್ಲಿಸಲು ಸೂಚಿಸಿದ್ದರು. ಆ ಪತ್ರಕ್ಕೆ ಉಪನೋಂದಣಾಧಿಕಾರಿ ಈವರೆಗೆ ಯಾವುದೇ ಉತ್ತರ ನೀಡಿರುವುದಿಲ್ಲ. ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಜೂನ್ 7ರಂದು ಕಾರಣ ಕೇಳುವ ನೋಟಿಸ್ ಜಾರಿ ಮಾಡಿ ಲಿಖಿತ ಉತ್ತರ ಮತ್ತು ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಕಚೇರಿಗೆ ಖುದ್ದಾಗಿ ಹಾಜರಾಗಿ ವರದಿ ಸಲ್ಲಿಸಲು ತಿಳಿಸಲಾಗಿತ್ತಾದರೂ ಯಾವುದಕ್ಕೂ ಸ್ಪಂದಿಸದೇ ಸರಕಾರಿ ಕೆಲಸದಲ್ಲಿ ನಿಷ್ಕಾಳಜಿತನ ತೋರುತ್ತಿರುವುದರಿಂದ ಇಂಡಿ ಉಪನೋಂದಣಾಧಿಕಾರಿ ರವೀಂದ್ರನಾಥ ಹಂಚಿನಾಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ.