ಚರಂಡಿ ನೀರು ವೀಸಿ ನಾಲೆ ಒಡಲಿಗೆ: ರೈತರ ಧರಣಿ

KannadaprabhaNewsNetwork |  
Published : Jun 19, 2024, 01:03 AM IST
18ಕೆಎಂಎನ್ ಡಿ20 | Kannada Prabha

ಸಾರಾಂಶ

ವಿಶ್ವೇಶ್ವರಯ್ಯ ನಾಲೆ ಒಡಲಿಗೆ ಚರಂಡಿ ನೀರು ಸೇರುತ್ತಿರುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ನಾಲಾ ಕೆಳಭಾಗದ ರೈತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿಶ್ವೇಶ್ವರಯ್ಯ ನಾಲೆ ಒಡಲಿಗೆ ಚರಂಡಿ ನೀರು ಸೇರುತ್ತಿರುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ನಾಲಾ ಕೆಳಭಾಗದ ರೈತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಮಧ್ಯೆ ಭಾಗದಲ್ಲಿ ಹರಿಯುವ ವಿಶ್ವೇಶ್ವರಯ್ಯ ನಾಲಾ ಏರಿ ಮೇಲೆ ಸೇರಿದ ತಾಲೂಕಿನ ಹಿರೇಮರಳಿ, ಕನಗನಮರಡಿ ಹಾಗೂ ಬೇವಿನಕುಪ್ಪೆ ರೈತರು, ಕಾವೇರಿ ನೀರಾವರಿ ನಿಗಮ ಮತ್ತು ಪುರಸಭೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹೌಸಿಂಗ್‌ ಬೋರ್ಡ್ ಕಾಲನಿ, ಶಾಂತಿನಗರ, ಮಹಾಕಾಳೇಶ್ವರಿ ಬಡಾವಣೆ, ಮಹಾತ್ಮಗಾಂಧಿ ನಗರದ ನಿವಾಸಿಗಳು ಬಳಸುವ ಮಲಿನ ನೀರು ಹಾಗೂ ಒಳಚರಂಡಿ ವ್ಯವಸ್ಥೆ ತ್ಯಾಜ್ಯ ನೀರು ನಾಲೆಗೆ ಒಡಲು ಸೇರದಂತೆ ಕ್ರಮವಹಿಸುವಂತೆ ಮನವಿ ಮಾಡಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮ ಆಗಿಲ್ಲ. ಪ್ರತಿ ಬಾರಿ ಮನವಿ ಮಾಡಿದಾಗಲೂ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಮಾತ್ರ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಪಟ್ಟಣದ ಮಧ್ಯೆ ಭಾಗದಲ್ಲಿ ವಿಶ್ವೇಶ್ವರಯ್ಯ ನಾಲಾ ಮೇಲ್ಭಾಗದ ಎಲ್ಲಾ ಬಡಾವಣೆಗಳ ಮಲೀನ ನೀರನ್ನು ನಾಲೆಗೆ ಬಿಡಲಾಗಿದೆ ಎಂದರು.

ಮಹಾತ್ಮಗಾಂಧಿ ನಗರ ಮತ್ತು ಹನುಮಂತನಗರದ ಬಳಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದೆ. ಇದರ ತ್ಯಾಜ್ಯವೂ ನಾಲೆಗೆ ಸೇರುತ್ತಿದೆ. ಇದರಿಂದ ನಾಲಾ ಕೆಳಭಾಗದ ರೈತರು ಮತ್ತು ನಿವಾಸಿಗಳು ನೀರನ್ನು ಬಳಸದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಲಾ ಕೆಳಭಾಗದಲ್ಲಿ ಹಲವಾರು ಗ್ರಾಮಗಳಿದ್ದು, ಗ್ರಾಮದವರು ಬಟ್ಟೆ ಹೊಗೆಯಲು, ಪಾತ್ರೆ ತೊಳೆಯಲು ಹಾಗೂ ಹಸು-ಕರುಗಳಿಗೆ ನೀರು ಕುಡಿಸಲು ನಾಲೆ ನೀರಿನ ಮೇಳೆ ಅವಲಂಭಿತರಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿತನದಿಂದ ನಾಲೆ ನೀರಿ ಮಲೀನವಾಗುತ್ತಿದೆ. ಕೆಳ ಭಾಗದ ಜನರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ ಎಂದು ದೂರಿದರು.ಈ ಹಿಂದೆ ನಾಲೆ ನೀರು ಪರಿಶುದ್ಧವಾಗಿತ್ತು. ರೈತರು ಗದ್ದೆಯಲ್ಲಿ ಹರಿಯುವ ಜಿಗಳಿನ ನೀರನ್ನೇ ಕುಡಿದು ದಣಿವಾರಿಸಿ ಕೊಳ್ಳುತ್ತಿದ್ದರು. ಈಗ ಕುಡಿಯುವುದಿರಲಿ ನೀರನ್ನು ಮುಟ್ಟಲು ಹಲವು ಬಾರಿ ಯೋಚಿಸಬೇಕಿದೆ. ಒಳಚರಂಡಿ ಅವ್ಯವಸ್ಥೆಯಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಗಳು ವಾದಿಸುತ್ತಾರೆ ಎಂದರು.

ನಮಗೆ ಶುದ್ಧ ನೀರು ಸಿಗಬೇಕು. ಅಧಿಕಾರಿಗಳ ಭರವಸೆಯಂತೆ ಹತ್ತು ದಿನಗಳ ಕಾಲ ಗಡುವು ನೀಡಲಾಗಿದೆ. ಬಳಿಕ ಪಟ್ಟಣದ ಡಾ.ರಾಜ್‌ಕುಮರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬೇವಿನಕುಪ್ಪೆ ಶಿವರಾಮು, ಉದೇಶ್, ಗ್ರಾಪಂ ಸದಸ್ಯ ಯಶವಂತ, ಡೇರಿ ಅಧ್ಯಕ್ಷ ಚಂದ್ರಶೇಖರ್, ಹಿರೇಮರಳಿ ಎಚ್.ಕೆ.ದೊರೆಸ್ವಾಮಿ, ಜ್ಞಾನೇಶ್, ಪಾರ್ಥ, ಕುಮಾರ, ಚಿಕ್ಕಾಡೆ ಮನು ಇತರರು ಇದ್ದರು.

18ಕೆಎಂಎನ್ ಡಿ20

ಪಾಂಡವಪುರದಲ್ಲಿ ವಿಶ್ವೇಶ್ವರಯ್ಯ ನಾಲೆಗೆ ಒಳಚರಂಡಿ ತ್ಯಾಜ್ಯ ನೀರು ಸೇರದಂತೆ ಕ್ರಮ ವಹಿಸುವಂತೆ ಪುರಸಭೆ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ