ವಿದ್ಯೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ: ಶಾಸಕ ಸಿಮೆಂಟ್‌ ಮಂಜು

KannadaprabhaNewsNetwork | Published : Jun 23, 2024 2:06 AM

ಸಾರಾಂಶ

ವಿದ್ಯೆಯಿಂದ ಮಾತ್ರ ಮನುಷ್ಯನ, ಸಮಾದ ಸರ್ವಾಂಗೀಣ ಅಭಿವೃದ್ದಿ ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಸಕಲೇಶಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಭಾ ಪುರಸ್ಕಾರ । ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಗೌರವ

ಕನ್ನಡಪ್ರಭ ವಾರ್ತೆ ಸಕಲೇಶಪುರ

ವಿದ್ಯೆಯಿಂದ ಮಾತ್ರ ಮನುಷ್ಯನ, ಸಮಾದ ಸರ್ವಾಂಗೀಣ ಅಭಿವೃದ್ದಿ ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಸಮಾಜ ಸದೃಢಗೊಳ್ಳಬೇಕಾದರೆ ಆ ಸಮಾಜದಲ್ಲಿನ ಯುವಕರು ವಿದ್ಯಾವಂತರಾಗಬೇಕು. ವಿದ್ಯೆ ಮಾತ್ರ ಕದಿಯಲಾಗದ ಸಂಪತ್ತು. ಅಂಬೇಡ್ಕರ್ ಅವರಿಗೆ ಗೌರವ ನೀಡವುದಾದರೆ ಅವರು ಹೇಳಿದಂತೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ತುಳಿತಕ್ಕೊಳಗಾದ ಸಮಾಜ ಮೇಲ್ಪಂಕ್ತಿಗೆ ಬರಬೇಕಾದರೆ ವಿದ್ಯೆಯಿಂದ ಮಾತ್ರ. ಸ್ವತಂತ್ರ ಬಂದು ೭೫ ವರ್ಷಗಳೇ ಕಳೆಯುತ್ತಿದ್ದರೂ ಪರಿಶಿಷ್ಟ ಜಾತಿ ಪಂಗಡಗಳಲ್ಲಿ ಇಂದಿಗೂ ಸಾಕಷ್ಟು ಅನಕ್ಷರಸ್ಥರಿರುವುದು ವಿಪರ್ಯಾಸ. ಆಸ್ತಿ ಗಳಿಸಲು ಸಾಧ್ಯವಿಲ್ಲವಾದರೂ ಮಕ್ಕಳಿಗೆ ನಾಲ್ಕಕ್ಷರ ಕಲಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ ಎಂದು ಹೇಳಿದರು.

ಮೂಡಿಗೆರೆ ಕ್ಷೇತ್ರದ ಮಾಜಿ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ವಿದ್ಯೆಯಿಂದ ಮಾತ್ರ ಬಡತನ ನಿರ್ಮೂಲನೆ ಸಾದ್ಯ. ದುಶ್ಚಟಗಳಿಂದ ದೂರವಿದ್ದು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿದಲ್ಲಿ ಜೀವನ ಅರ್ಥ ಪಡೆದುಕೊಳ್ಳಲಿದೆ. ಪ್ರತಿಯೊಬ್ಬ ಸಮಾಜದ ಬಂಧುಗಳು ಅಂಬೇಢ್ಕರ್ ಜೀವನವನ್ನು ಧ್ಯೇಯವಾಗಿ ಪಾಲಿಸಿದರೆ ಕುಟುಂಬ ಹಾಗೂ ಸಮಾಜ ಸದೃಢಗೊಳ್ಳಲಿದೆ ಎಂದರು.

ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಇ. ಕ್ರಾಂತಿ ಮಾತನಾಡಿ, ಸಮಾಜದಲ್ಲಿ ಗೌರವ ದೊರೆಯಬೇಕಾದರೆ ವಿದ್ಯೆಗೆ ಹೆಚ್ಚಿನ ಅಧ್ಯತೆ ನೀಡಬೇಕು. ಇಂದು ವಿವಿಧ ರಂಗಗಳಲ್ಲಿ ಅಭೂತಪೂರ್ವ ಅವಕಾಶಗಳಿದ್ದು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಆಯೋಜನೆಯ ಉದ್ದೇಶ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶೇ ೮೦ಕ್ಕಿಂತ ಅಧಿಕ ಅಂಕ ಪಡೆದ ೨೫೦ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಆನಂದ್‌ಮೂರ್ತಿ,ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ಮಹೇಶ್.ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಎಚ್.ಎಸ್.ಕರುಣಕರ್,ವಿಜಯ್‌ಕುಮಾರ್, ಶಿಲ್ಪಾ, ಪೃಥ್ವಿ ಕೊಣ್ಣೂರು ಸೇರಿ ಹಲವರು ಇದ್ದರು.

Share this article