ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿ: ಚುಂಚಶ್ರೀ

KannadaprabhaNewsNetwork |  
Published : Mar 01, 2026, 02:00 AM IST
28ಕೆಎಂಎನ್ ಡಿ18  | Kannada Prabha

ಸಾರಾಂಶ

ಸಮಾಜ ಮತ್ತು ಸಮುದಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಮಠದಿಂದ ಹಲವು ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಸಮುದಾಯ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಂಘ ಸಂಸ್ಥೆಗಳು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಒಕ್ಕಲಿಗರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಸಮುದಾಯ ಹಾಗೂ ಸಮಾಜದ ಜ್ಯೋತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂತಹ ಶ್ರೇಷ್ಠ ಗುರುಗಳ ಸಮಾಜಮುಖಿ ಕೆಲಸ ಕಾರ್ಯಗಳು ನಮಗೆ ಆದರ್ಶವಾಗಬೇಕು ಎಂದರು.

ಸಮಾಜ ಮತ್ತು ಸಮುದಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಮಠದಿಂದ ಹಲವು ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಸಮುದಾಯ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಪ್ರಾಸ್ತಾವಿಕ ನುಡಿಗಳಾಡಿದ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ತಮ್ಮನ್ನು ತಾವು ಯಾವ ರೀತಿ ತೊಡಗಿಸಿಕೊಳ್ಳಬೇಕೆಂದು ಚಿಂತನೆ ನಡೆಸುವ ಸಲುವಾಗಿ ಒಕ್ಕಲಿಗರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶ ಆಯೋಜಿಸಲಾಗಿದೆ ಎಂದರು.

ಕೆಸಿಡಿಸಿಎಲ್ ಅಧ್ಯಕ್ಷ ಎ.ಎನ್.ನಟರಾಜ್ ಮಾತನಾಡಿ, ಶ್ರೀಮಠದ ಪೀಠಾಧ್ಯಕ್ಷರ ಸಲಹೆ ಮಾರ್ಗದರ್ಶನ ಪಡೆದು ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಸಿಗುವ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮುದಾಯದ ಮಕ್ಕಳನ್ನು ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಕ್ಕಲಿಗರ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಮಲೆನಾಡು ಭಾಗದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿ ಒಕ್ಕಲುತನ ಮಾಡುತ್ತಿರುವ ಒಕ್ಕಲಿಗರು ಊರು ಬಿಟ್ಟು ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಶ್ರೀಮಠ ಹಾಗೂ ರಾಜ್ಯ ಒಕ್ಕಲಿಗರ ಸಂಘ ಧ್ವನಿ ಎತ್ತಬೇಕಿದೆ ಮನವಿ ಮಾಡಿದರು.

ಗ್ರಾಮೀಣ ಪ್ರದೇಶದ ಕೃಷಿ ಉದ್ದೇಶಿತ ಭೂಮಿಗಳಿಗೂ ಅನ್ವಯವಾಗುವಂತೆ ಭೂ ಒತ್ತುವರಿ ಮತ್ತು ಭೂಕಬಳಿಕೆ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಒಕ್ಕಲುತನ ಮಾಡುತ್ತಿರುವ ರೈತರಿಗೆ ಭೂಕಬಳಿಕೆದಾರರೆಂದು ಹಣೆಪಟ್ಟಿ ಕಟ್ಟಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಒಕ್ಕಲಿಗ ಸಮುದಾಯ ಸಂಘಟಿತವಾಗಬೇಕಿದೆ. ಜಿಲ್ಲಾ, ವಿಭಾಗ ಹಾಗೂ ತಾಲೂಕು ಮಟ್ಟದಲ್ಲಿ ಸಮಾವೇಶ ಆಯೋಜಿಸಿ ಸಾಮರಸ್ಯ ಮೂಡಿಸಬೇಕಿದೆ ಎಂದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಒಕ್ಕಲಿಗರ ಸಂಘ ಸಂಸ್ಥೆಗಳ ನೂರಾರು ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಜೊತೆಗೆ ಸಂಘಸಂಸ್ಥೆಗಳು ಮಾಡಬಹುದಾದ ಒಳ್ಳೆಯ ಕೆಲಸಗಳ ಬಗ್ಗೆ ಚರ್ಚಿಸಿದರು. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು.

ಶ್ರೀಮಠದ ಚೈತನ್ಯನಾಥಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್, ನಿರ್ದೇಶಕ ನೆಲ್ಲಿಗೆರೆ ಬಾಲು, ಕೋನಪ್ಪರೆಡ್ಡಿ, ಮೈಸೂರಿನ ಗಂಗಾಧರ್, ಶ್ರೀಧರ್, ಮಂಜೇಗೌಡ, ಚಿತ್ರದುರ್ಗದ ರಾಘವೇಂದ್ರ, ತುಮಕೂರಿನ ಹನುಮಂತ ರಾಯಪ್ಪ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಶ್ರೀನಿವಾಸಯ್ಯ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಎ.ಟಿ.ಶಿವರಾಮು ಸೇರಿದಂತೆ ಒಕ್ಕಲಿಗರ ಸಂಘದ ರಾಜ್ಯ, ಜಿಲ್ಲೆ ಹಾಗೂ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲಾನಂದನಾಥ ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ
ಭಾರತೀಯ ವಿಜ್ಞಾನಿಗಳ ಕೊಡುಗೆ ಗೌರವಿಸಿ: ಮಜ್ಜಿಗೆಪುರ ಕೆ.ಶಿವರಾಮು