ಯುವಕ ಕವಿಗಳು ಹಿರಿಯ ಕವಿಗಳ ಕೃತಿಗಳು, ಪುಸ್ತಕಗಳನ್ನು ಓದಬೇಕು: ಸತೀಶ್ ಜವರೇಗೌಡ

KannadaprabhaNewsNetwork |  
Published : Mar 01, 2026, 02:00 AM IST
28ಕೆಎಂಎನ್ ಡಿ14 | Kannada Prabha

ಸಾರಾಂಶ

ಮಂಡ್ಯದ ತಲ್ಲಣಗಳೇ ಇಡೀ ಇಂಡಿಯಾ, ಜಗತ್ತಿನ ತಲ್ಲಣಗಳಾಗಿಯೂ ಇಂದು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಅಕ್ಷರ ಹೊಸ ಕಾವ್ಯ ಕವಿಗೋಷ್ಠಿಯು ಸಮಗ್ರ ಮಂಡ್ಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಿದೆ. ಆ ಮೂಲಕ ಭ್ರಷ್ಟಾಚಾರ, ಕೋಮುವಾದ, ಮಕ್ಕಳ ಮತ್ತು ಸ್ತ್ರೀಯರ ಮೇಲಿನ ಶೋಷಣೆ, ಭ್ರೂಣ ಹತ್ಯೆ ಹಾಗೂ ರೈತರ ತಲ್ಲಣಗಳಿಗೆ ಕವಿಗಳು ಗಟ್ಟಿಯಾದ ದನಿಯಾಗಿ ತಮ್ಮ ಜೀವಪರತೆಯನ್ನು ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವ ಕವಿಗಳು ಹಿರಿಯ ಕವಿಗಳ ಮಹತ್ವ ಕೃತಿಗಳನ್ನು, ಪುಸ್ತಕಗಳನ್ನು ಓದುವುದರಿಂದ ತಮ್ಮನ್ನು ಅರಿವಿನೆಡೆಗೆ, ವಿಕಾಸದೆಡೆಗೆ ಕರೆಯೊಯ್ಯುತ್ತದೆ ಎಂದು ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಪರಿಚಯ ಪ್ರಕಾಶನದಿಂದ ನಡೆದ ಅಕ್ಷರ ಹೊಸ ಕಾವ್ಯ- ವಸಂತ ಕವಿಗೋಷ್ಠಿಯಲ್ಲಿ ಮಾತನಾಡಿ, ಕವಿಯಾಗಲಿ ಅಥವಾ ಸಹೃದಯನಾಗಲಿ ಪ್ರತಿಯೊಬ್ಬ ವ್ಯಕ್ತಿಗೂ ಸಾಹಿತ್ಯ ಕೃತಿಗಳ ಓದು ಬಹಳ ಮುಖ್ಯ.‌ ಓದುವ ಹವ್ಯಾಸದಿಂದ ಅರಿವಿನ ಹಾದಿ ತೆರೆಯುತ್ತದೆ ಎಂದರು.

ಕನ್ನಡದ ಹಿರಿಯ ಕವಿಗಳ ಮಹತ್ವದ ಕೃತಿಗಳ ಅಧ್ಯಯನದಿಂದ ತಮ್ಮ ಕಾವ್ಯ ಕೃಷಿಯ ದೃಷ್ಟಿ ಸೂಕ್ಷ್ಮವಾಗಲು, ಹೊಳಪು ಹೆಚ್ಚಲು, ಸ್ಪಷ್ಟ ಚಿಂತನೆ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದರು.

ಮಂಡ್ಯದ ತಲ್ಲಣಗಳೇ ಇಡೀ ಇಂಡಿಯಾ, ಜಗತ್ತಿನ ತಲ್ಲಣಗಳಾಗಿಯೂ ಇಂದು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಅಕ್ಷರ ಹೊಸ ಕಾವ್ಯ ಕವಿಗೋಷ್ಠಿಯು ಸಮಗ್ರ ಮಂಡ್ಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಿದೆ. ಆ ಮೂಲಕ ಭ್ರಷ್ಟಾಚಾರ, ಕೋಮುವಾದ, ಮಕ್ಕಳ ಮತ್ತು ಸ್ತ್ರೀಯರ ಮೇಲಿನ ಶೋಷಣೆ, ಭ್ರೂಣ ಹತ್ಯೆ ಹಾಗೂ ರೈತರ ತಲ್ಲಣಗಳಿಗೆ ಕವಿಗಳು ಗಟ್ಟಿಯಾದ ದನಿಯಾಗಿ ತಮ್ಮ ಜೀವಪರತೆಯನ್ನು ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

ಸಾಹಿತಿ ಮತ್ತು ರಂಗಕರ್ಮಿ ಮೈಸೂರಿನ ಡಾ.ಸುಜಾತ ಅಕ್ಕಿ ಮಾತನಾಡಿ, ಕನ್ನಡದ ಕವಿಗಳು ರಾಜರೂ ಮಾರ್ಗಕಾರರೂ ಕಲಿಗಳೂ ಹೌದು. ಇಂತಹ ಕವಿಗಳು ತಮ್ಮ ಸಾಹಿತ್ಯದ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕೊಡುವ, ಸಂದೇಶವನ್ನೂ ನೀಡುವ ಚಿಕಿತ್ಸಕರೂ ಹೌದು ಎಂದು ವ್ಯಾಖ್ಯಾನಿಸಿದರು.

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕವಿತ್ವದ ಗುಣವಿದೆ. ಆದ್ದರಿಂದಲೇ ಯಾವುದೇ ವಿಷಯ ಕುರಿತು ಕಾವ್ಯವನ್ನು ರಚಿಸುವ ಶಕ್ತಿ ಕನ್ನಡಿಗರಲ್ಲಿ ಹಾಸು ಹೊಕ್ಕಾಗಿದೆ.ಕನ್ನಡ ನೆಲದಲ್ಲಿ ಹುಟ್ಟಿದ ವಚನ ಸಾಹಿತ್ಯವು ರಾಜಸತ್ತೆಯ ವಿರುದ್ಧ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿ, ಸಮಾಜದಲ್ಲಿ ಸಮಾನತೆ ಸಾಧಿಸಿದ್ದು ಅದರ ವೈಶಿಷ್ಟ್ಯವಾಗಿದೆ ಎಂದು ವಿಶ್ಲೇಷಿಸಿದರು.

ವೇದಿಕೆಯಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯಕುಮಾರ್, ಸಂಸ್ಕೃತಿ ಚಿಂತಕ‌ ಪ್ರೊ.ಪ್ರಸನ್ನಕುಮಾರ್ ಕೆರಗೋಡು, ಕನ್ನಡ ಪರಿಚಾರಕ ಕೆ.ಟಿ.ಹನುಮಂತು, ಚಿತ್ರಕೂಟ ಸಂಸ್ಥೆ ಮುಖ್ಯಸ್ಥ ಎಚ್.ಎಸ್. ಧನುಷ್ ಗೌಡ, ಪರಿಚಯ ಪ್ರಕಾಶನದ ಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ 34 ಮಂದಿ ಕವನ ವಾಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲಾನಂದನಾಥ ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ
ಭಾರತೀಯ ವಿಜ್ಞಾನಿಗಳ ಕೊಡುಗೆ ಗೌರವಿಸಿ: ಮಜ್ಜಿಗೆಪುರ ಕೆ.ಶಿವರಾಮು