ಸೋಂದಾ ಕಲ್ಯಾಣಿಗೆ ಮರುಜೀವ ನೀಡಿದ ಉದ್ಯೋಗ ಖಾತ್ರಿ ಯೋಜನೆ

KannadaprabhaNewsNetwork |  
Published : Dec 13, 2025, 02:45 AM IST
12ಎಸ್.ಆರ್‍.ಎಸ್‌1ಪೊಟೋ1 (ಸೋಂದಾ ಗ್ರಾಮದಲ್ಲಿರುವ ಕಲ್ಯಾಣಿಗೆ ಮರುಜೀವ ನೀಡಿದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ.)12ಎಸ್.ಆರ್‍.ಎಸ್‌1ಪೊಟೋ2 (ಸೋಂದಾ ಗ್ರಾಮದಲ್ಲಿರುವ ಕಲ್ಯಾಣಿಗೆ ಮರುಜೀವ ನೀಡಿದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ.) | Kannada Prabha

ಸಾರಾಂಶ

ಶಿರಸಿ ತಾಲೂಕಿನ ಸೋಂದಾ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಹಳೆಯೂರು ಶ್ರೀ ಶಂಕರ ನಾರಾಯಣ ದೇವಳದ ಕಲ್ಯಾಣಿಗೆ ಮರುಜೀವ ನೀಡಲಾಗಿದೆ. ಈಗ ಈ ಕೆರೆಯ ಸೊಬಗು ಮರುಕಳಿಸಿದೆ.

ಶಿರಸಿ: ತಾಲೂಕಿನ ಐತಿಹಾಸಿಕ ತಾಣಗಳಿಗೆ ಮರುಜೀವ ನೀಡಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕೈಜೋಡಿಸಿದೆ.

ಜೈನರ ಕಾಲದಲ್ಲಿ ನಿರ್ಮಿತವಾದ ಸೋಂದೆ ಗ್ರಾಮದಲ್ಲಿ ಅನೇಕ ಐತಿಹಾಸಿಕ ದೇವಾಲಯಗಳು, ಕೆರೆ-ಕಟ್ಟೆಗಳು ನಿರ್ವಹಣೆ ಇಲ್ಲದೇ ನಶಿಸುವ ಅಂಚಿನಲ್ಲಿವೆ. ಬಸದಿಗಳ ಪಕ್ಕದಲ್ಲಿಯೇ ಹೊಂದಿಕೊಂಡಂತೆ ಇರುವ ನೀರಿನ ಮೂಲಗಳು ವಿನಾಶದತ್ತ ಸಾಗುತ್ತಿವೆ. ಅವುಗಳಲ್ಲಿ ಹಳೆಯೂರು ಮಜರೆಯಲ್ಲಿರುವ ಶ್ರೀ ಶಂಕರ ನಾರಾಯಣ ದೇವಳದ ಬಳಿ ಇರುವ ಕಲ್ಯಾಣಿಯೂ ಒಂದು.

ಸೋಂದಾ ಗ್ರಾಪಂನಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಡಿ ಅಂದಾಜು ₹7.23 ಲಕ್ಷ ವೆಚ್ಚದಲ್ಲಿ 589 ಮಾನವ ದಿನಗಳ ಸೃಜನೆಯೊಂದಿಗೆ ಈ ವರೆಗೆ ₹2,11,441 ಕೂಲಿಯೊಂದಿಗೆ ₹3,40,000 ಸಾಮಗ್ರಿ ವೆಚ್ಚ ವ್ಯಯಿಸಿ, ಕಲ್ಯಾಣಿ ಪುನಃಚೇತನಗೊಳಿಸಲಾಗಿದೆ.

ಕಲ್ಯಾಣಿಯ ಸೊಬಗು ಕಾಪಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲು ಆರಂಭಿಸಿ, 13 ಮೀ ಉದ್ದ 11 ಮೀ ಅಗಲ ಹಾಗೂ 4.5 ಮೀ ಆಳ ವಿಸ್ತರಿಸಿ, ಚಿರೆ ಕಲ್ಲಿನಿಂದ ಆಯತಾಕಾರದ ಆಕೃತಿಯಲ್ಲಿ ರೂಪ ನೀಡಲಾಗಿದೆ. ಆರಂಭದಲ್ಲಿ 12 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದ ಕಲ್ಯಾಣಿಯೂ ಕಾಮಗಾರಿಯ ನಂತರ ಅಂದಾಜು 2,37,000 ಲೀಟರ್ ನೀರನ್ನು ಹಿಡಿದಿಡುವ ಸಾಮರ್ಥ್ಯ ಪಡೆದಿದೆ.

ಪಾಳುಬಿದ್ದಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಹೂಳೆತ್ತಿ, ಅದಕ್ಕೆ ಸುತ್ತಲೂ ಆಯತಾಕೃತಿಯಲ್ಲಿ ಕಲ್ಲಿನ ಪಿಚ್ ನಿರ್ಮಿಸಿ, ನೀರಿನ ಬಳಕೆಗೆ ಅನುಕೂಲ ಆಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುತ್ತಲೂ ಕುಳಿತುಕೊಳ್ಳಲು ಕಟ್ಟೆ ನಿರ್ಮಿಸಲಾಗಿದೆ.

ಇದೀಗ ಕಲ್ಯಾಣಿಯ ಪುನರುಜ್ಜೀವನದಿಂದಾಗಿ ನೀರು ದೈನಂದಿನ ಬಳಕೆ ಮಾಡಲು ಅನುಕೂಲವಾಗಿದೆ. ಸುತ್ತಲಿನ ಹಸಿರಿನೊಂದಿಗೆ ಅಚ್ಚುಕಟ್ಟಾಗಿ ನಿರ್ಮಿತಗೊಂಡ ಕೆರೆಯ ಸೊಬಗು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿಯ ಮಠದೇವಳ ಗ್ರಾಮದ ಹಳೆಯೂರು ಮಜರೆಯಲ್ಲಿ ಶ್ರೀ ಶಂಕರ ನಾರಾಯಣ ದೇವಾಲಯ ಇದೆ. ಸೋದೆ ಅರಸರ ಕಾಲದಲ್ಲಿ ನಿರ್ಮಾಣವಾಗಿ ವೈಭವದಿಂದ ಮೆರೆದ ಈ ದೇಗುಲ ರಾಜರ ಕಾಲಾನಂತರ ಸರಿಯಾದ ನಿರ್ವಹಣೆ ಇಲ್ಲದೇ ಅವನತಿ ಹೊಂದಿತ್ತು. 2002-03ರಲ್ಲಿ ರಾಜ್ಯ ಸರ್ಕಾರ, ಧರ್ಮೋತ್ಥಾನ ಟ್ರಸ್ಟ್‌ ಹಾಗೂ ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನದ ನೆರವಿನಿಂದ ಊರ ನಾಗರಿಕರು ಬೀಳುವ ಹಂತದಲ್ಲಿದ್ದ ಈ ದೇಗುಲವನ್ನು ಸಂಪೂರ್ಣ ಜೀರ್ಣೋದ್ಧಾರ ಮಾಡಿದ್ದಾರೆ. ದೇವಳಕ್ಕೆ ಸಂಬಂಧಿಸಿದ ಕಲ್ಯಾಣಿ ಮಾತ್ರ ಗಿಡಗಂಟಿಗಳಿಂದ ಆವೃತವಾಗಿ ಜನಮಾನಸದಿಂದ ದೂರವಾಗಿತ್ತು. ಈಗ ಕಲ್ಯಾಣಿಯೂ ಅಭಿವೃದ್ಧಿಯಾಗಿ ಶೋಭಿಸುತ್ತಿದೆ ಎನ್ನುತ್ತಾರೆ ಸೋಂದಾ ಜಾಗ್ರತ ವೇದಿಕೆ ಕಾರ್ಯಾಧ್ಯಕ್ಷ ರತ್ನಾಕರ ಹೆಗಡೆ.

ಜಿಲ್ಲೆಯಲ್ಲಿ ಮಾದರಿ: ಈಗ ಉತ್ತರ ಕನ್ನಡ ಜಿಪಂ ಜಾಗ್ರತ ವೇದಿಕೆಯ ಕೋರಿಕೆಯಂತೆ ಸೋಂದಾ ಗ್ರಾಪಂ ಮುಖಾಂತರ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಯಾಣಿ ಸಂಪೂರ್ಣ ಅಭಿವೃದ್ಧಿಪಡಿಸುತ್ತಿರುವುದು ಜಿಲ್ಲೆಯಲ್ಲಿ ಮಾದರಿ ಹಾಗೂ ಶ್ಲಾಘನೀಯ ಕಾರ್ಯವಾಗಿದೆ. ಇದಕ್ಕೆ ಸೋಂದಾ ಜಾಗ್ರತ ವೇದಿಕೆಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸೋಂದಾ ಜಾಗ್ರತ ವೇದಿಕೆ ಕಾರ್ಯಾಧ್ಯಕ್ಷ ರತ್ನಾಕರ ಹೆಗಡೆ ಹೇಳಿದರು.

ನೀರಿನ ಮೂಲಗಳ ಸಂರಕ್ಷಣೆ ದೃಷ್ಟಿಯಿಂದ ನರೇಗಾದಡಿ ಕೆರೆ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಅರಸರ ಕಾಲದ ಈ ಕಲ್ಯಾಣಿಯ ಚಿತ್ರಣ ಅದ್ಭುತವಾಗಿ ಮೂಡಿಬಂದಿದೆ. ಇಂತಹ ಕಾಮಗಾರಿಗಳ ಸಮರ್ಪಕ ಸದುಪಯೋಗ ಸಾರ್ವಜನಿಕರು ಹೆಚ್ಚು ಪಡೆಯುವಂತಾಗಲಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಹೇಳಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಐತಿಹಾಸಿಕ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಿರುವುದು ತುಂಬಾ ಹೆಮ್ಮೆಯ ಸಂಗತಿ. ಬಸದಿಗಳಿಂದ ತುಂಬಿರುವ ಸೋಂದೆಯಲ್ಲಿ ನರೇಗಾ ಯೋಜನೆಯು ಅಭಿವೃದ್ಧಿಗೆ ಪೂರಕವಾಗಿರುವುದರಿಂದ ಸಾರ್ವಜನಿಕ ಸ್ವತ್ತುಗಳ ಸಂರಕ್ಷಣೆಗೆ ಅನುಕೂಲವಾಗಿದೆ ಎಂದು ಸೋಂದಾ ಗ್ರಾಪಂ ಅಧ್ಯಕ್ಷ ರಾಮಚಂದ್ರ ಹೆಗಡೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ