ಶಿಗ್ಗಾಂವಿ:ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಈ ಬಗ್ಗೆ ದೆಹಲಿಯವರು ಮತ್ತು ಸಿಎಂ ಅವರು ಹೇಳಬೇಕಷ್ಟೇ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಳಗಾವಿ ಅಧಿವೇಶನ ವೇಳೆ ಡಿನ್ನರ್ ಪಾಲಿಟಕ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಅಧಿವೇಶನದಲ್ಲೂ ಸಹಜವಾಗಿ ಎಲ್ಲರೂ ಸೇರುತ್ತೇವೆ. ಇದರಲ್ಲಿ ರಾಜಕೀಯ ಏನಿಲ್ಲ. ಸಿಎಂ ಮತ್ತು ಡಿಸಿಎಂ ದೆಹಲಿ ಪ್ರವಾಸದ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ದ್ವೇಷ ಭಾಷಣ ಮಾಡೋದು ಬಿಜೆಪಿಯವರು. ಅವರಿಗೆ ಎಲ್ಲಿ ಶಿಕ್ಷೆ ಆಗುತ್ತದೋ ಎಂಬ ಭಯ. ಪ್ರತಿ ದಿನವೂ ದೇಶದಲ್ಲಿ ದ್ವೇಷ ಭಾಷಣವನ್ನೇ ಮಾಡುತ್ತಾರೆ. ಮೋದಿಯಿಂದ ಹಿಡಿದು ಅಮಿತ್ ಶಾ ವರೆಗೂ ದ್ವೇಷ ಭಾಷಣ ಮಾಡುತ್ತಾರೆ. ವಾಟ್ಸಪ್, ಸೋಶಿಯಲ್ ಮೀಡಿಯಾದಲ್ಲಿ ದ್ವೇಷ ಭಾಷಣ ಮಾಡುತ್ತಾರೆ. ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಇದೆ, ಎಲ್ಲರಿಗೂ ಅವಕಾಶವಿದೆ. ಹಾಗಂತ ಎಲ್ಲರಿಗೂ ಬೈಯಲಿ, ಎತ್ತಿ ಕಟ್ಟಿ ಅಂತ ಹೇಳಿಲ್ಲ. ದ್ವೇಷ ಭಾಷಣದಿಂದ ನಮ್ಮ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಅದನ್ನು ಪ್ರಾರಂಭ ಮಾಡಿದ್ದು ಬಿಜೆಪಿ, ಭಜರಂಗದಳ ಮತ್ತು ಆರ್‌ಎಸ್‌ಎಸ್‌ನವರು. ನಾನು ಹಿಂದೆ ಗೃಹ ಮಂತ್ರಿಯಾಗಿದ್ದೆ. ಇವರ ಕತೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.