ಬಳ್ಳಾರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಬಳ್ಳಾರಿ ಹಗೂ ವಿಜಯನಗರ ಜಿಲ್ಲಾ ಪ್ರಾಂಶುಪಾಲರ ಸಂಘ ಹಾಗೂ ಸೇಂಟ್ ಜಾನ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಪಂದ್ಯಾವಳಿಗೆ ಶುಕ್ರವಾರ ಸಂಜೆ ಚಾಲನೆ ದೊರೆಯಿತು.ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಮೇಯರ್ ಪಿ.ಗಾದೆಪ್ಪ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾ ಚಟುವಟಿಕೆಯ ಮಹತ್ವ ಕುರಿತು ತಿಳಿಸಿದರು.
ಬಳ್ಳಾರಿಯಲ್ಲಿ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ನಡೆಯುತ್ತಿರುವುದು ವೈಯಕ್ತಿಕವಾಗಿ ನನಗೆ ಖುಷಿ ನೀಡಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿರುವ ಯುವ ಕ್ರೀಡಾಪಟುಗಳು ಗೆಲುವಿನತ್ತ ದೃಷ್ಟಿಯಿಡಿ. ಹಾಗಂತ ಸೋಲುಂಟಾದಲ್ಲಿ ಕುಗ್ಗಬೇಡಿ. ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಕಾರಣಕ್ಕಾಗಿಯೇ ಕ್ರೀಡೆಯನ್ನು ಸ್ಫೂರ್ತಿದಾಯಕವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇಂಟ್‌ಜಾನ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಫಾ. ಫಾನ್ಸಿಸ್ ಮಾತನಾಡಿ, ಕ್ರೀಡೆ ವಿದ್ಯಾರ್ಥಿ ಜೀವನದಲ್ಲಿ ಒಂದು ಸಣ್ಣ ಭಾಗವಷ್ಟೇ. ಅನೇಕರು ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡರೆ, ಮತ್ತೆ ಕೆಲವರು ಹವ್ಯಾಸವನ್ನಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಾಕಿಯಂತಹ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಯುವ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ಸಾಮರ್ಥ್ಯವೇ ಹೆಚ್ಚು ಕೆಲಸ ಮಾಡುತ್ತದೆ. ಶಿಲ್ಪಿಯು ತನ್ನ ಮನಸ್ಸಿನಲ್ಲಿ ಮೂಡಿದಂತೆ ಸುಂದರ ಶಿಲ್ಪವನ್ನು ಕೆತ್ತನೆ ಮಾಡಿದಂತೆ ಕ್ರೀಡೆಯು ಸಹ ಮನಸ್ಸಿನ ಮೇಲೆಯೇ ಅವಲಂಬಿತವಾಗಿರುತ್ತದೆ. ಕ್ರೀಡಾಕೂಟದಲ್ಲಿ ಪ್ರತಿಯೊಂದು ಕ್ಷಣವೂ ಸಹ ಬಹಳ ಮುಖ್ಯವಾಗಲಿದ್ದು, ಮೈಯಲ್ಲಾ ಕಣ್ಣಾಗಿಸಿಕೊಂಡು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ ಎಂದು ಹಾರೈಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮಣ ಆರ್.ಹಳ್ಳದಮನಿ ಅವರು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ಕ್ರೀಡಾಪಟುಗಳಿಗೆ ಶುಭಹಾರೈಸಿ ಮಾತನಾಡಿದರು.ಹಾಕಿ ಪಂದ್ಯಾವಳಿಯ ರಾಜ್ಯಮಟ್ಟದ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ಶಿವರಾಮ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ.ಎಂ.ರಾಜಣ್ಣ, ಉಪಾಧ್ಯಕ್ಷೆ ಬಿ.ಸುಲೇಖಾ, ಕಾರ್ಯದರ್ಶಿ ಪಿ.ನಾಗೇಶ್ವರರಾವ್, ಕಲ್ಯಾಣ ಕರ್ನಾಟಕ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸಂತೋಷ್ ರೆಡ್ಡಿ ಆರ್, ದೈಹಿಕ ಶಿಕ್ಷಣ ಇಲಾಖೆಯ ಜಿಲ್ಲಾ ಅಧಿಕಾರಿ ಸಿ.ಕೊಟ್ರೇಶ್, ಕುರುಗೋಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೇಣುಗೋಪಾಲ್, ಪಿಡಿಹಳ್ಳಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಾಗರ ಗೋಪಾಲ್, ಶಶಿಭೂಷಣ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಂತಜಾನ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಸತ್ಯಂ ಬಿಇಡಿ ಕಾಲೇಜಿನ ಉಪನ್ಯಾಸಕ ಆಲಂಬಾಷಾ ಹಾಗೂ ಅಲ್ಲಂ ಸುಮಂಗಳಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋವಿಂದರಾಜು ಅವರು ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾಪಟು ಪ್ರಜ್ಞಾ ಬಳ್ಳಾರಿ ಪ್ರತಿಜ್ಞಾವಿಧಿ ಬೋಧಿಸಿದರು. ಮೇಯರ್ ಗಾದೆಪ್ಪ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಬಳಿಕ ವಿವಿಧ ಜಿಲ್ಲೆಗಳ ಕ್ರೀಡಾ ತಂಡಗಳ ನಾಯಕರನ್ನು ಪರಿಚಯಿಸಿಕೊಂಡರು. ಮೈಸೂರು, ಬೆಂಗಳೂರು, ಮಂಡ್ಯ, ಕೋಲಾರ, ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದ 28 ಜಿಲ್ಲೆಗಳ 21 ಬಾಲಕರ ತಂಡಗಳು ಹಾಗೂ 19 ಬಾಲಕಿಯರ ತಂಡಗಳು ಭಾಗವಹಿಸಿವೆ.