ಕುಕನೂರು: ಸರ್ಕಾರದ ಐದು ವರ್ಷದ ಅವಧಿಯಲ್ಲಿ ಪುರುಷರಿಗೂ 2.5 ವರ್ಷ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಿ ಎಂದು ತಾಲೂಕು ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವ್ಯಕ್ತಿಯೊಬ್ಬರು ಆಗ್ರಹಿಸಿದ ಘಟನೆ ಜರುಗಿತು.
ಇನ್ನೊಬ್ಬರು ಬಸ್ಸಿನಲ್ಲಿ ಮಹಿಳೆಯರು ತುಂಬಿರುತ್ತಾರೆ. ಬಸ್ ಸೀಟುಗಳೆಲ್ಲ ಮಹಿಳೆಯರಿಗೆ ಸೀಮಿತವಾಗಿದೆ. ಪುರುಷರಿಗೆ ಸೀಟುಗಳೇ ಇಲ್ಲ. ಪುರುಷರು ಬಸ್ ಪ್ರಯಾಣ ಮಾಡುವುದಾದರೂ ಹೇಗೆ. ಅದಕ್ಕೆ ಬೆಂಗಳೂರು ಮಾದರಿಯಲ್ಲಿ ಪುರುಷರಿಗೆ ಕನಿಷ್ಠ 15 ಸೀಟುಗಳನ್ನಾದರೂ ಮೀಸಲು ಮಾಡಿ ಎಂದು ಆಗ್ರಹಿಸಿದರು. ಗ್ಯಾರಂಟಿ ಯೋಜನೆಯ ಮಂಡಳಿಯವರಿಗೆ ಇವರೆಡು ಪ್ರಶ್ನೆಗಳು ಕೆಲಹೊತ್ತು ಆಲೋಚನೆಯತ್ತ ಕೊಂಡೋಯ್ದದ್ದು ಕಂಡು ಬಂದಿತು.
ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲರೂ ಶ್ರಮಿಸೋಣ. ಸರ್ಕಾರ ಬಡವರು, ಮಕ್ಕಳು ಮಹಿಳೆಯರು ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹಲವಾರು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ.ಅದರಂತೆ ಸರ್ಕಾರ ನುಡಿದಂತೆ ಯೋಜನೆ ಜಾರಿಗೆ ತಂದಿದೆ.ಇದರಿಂದ ಹಲವಾರು ಜನಸಾಮಾನ್ಯರು ಪ್ರಯೋಜನ ಪಡೆಯುತ್ತಾ ಬಂದಿದ್ದಾರೆ. ಮುಖ್ಯವಾಗಿ ಬಡವರಿಗೆ ಅನ್ನ ಭಾಗ್ಯ ಯೋಜನೆ ಮೂಲಕ 10ಕೆಜಿ ಅಕ್ಕಿ ನೀಡುತ್ತಿದ್ದು, ಇದರಿಂದ ರಾಜ್ಯವು ಹಸಿವು ಮುಕ್ತ ಕರ್ನಾಟಕ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದರು.ಗ್ಯಾರಂಟಿ ಯೋಜನೆಯ ಯುವ ನಿಧಿ ಯೋಜನೆಯಲ್ಲಿ ಡಿಗ್ರಿ ಪಾಸಾದವರಿಗೆ ₹3ಸಾವಿರ, ಡಿಪ್ಲೋಮಾ ಪದವಿ ಪಡೆದವರಿಗೆ ₹1500 ನಮ್ಮ ಸರ್ಕಾರ ನೀಡುತ್ತಿದೆ. ನಮ್ಮ ತಾಲೂಕಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಯುವಕರಿಗೆ ಉದ್ಯೋಗ ಮಾಡಲು ಉಪಯುಕ್ತ ತರಬೇತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮಂಗಳೂರು ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವಕರಿಗೆ ವಿದ್ಯಾರ್ಥಿಗಳಿಗೆ ವಿಶೇಷ ಉದ್ಯೋಗ ಶಿಬಿರ ಏರ್ಪಡಿಸಲಾಗುವುದು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಮಾತನಾಡಿ, ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಶೇ. 99 ರಷ್ಟು ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆ ಸದುಪಯೋಗ ಪಡೆಯುತ್ತಿದ್ದಾರೆ. ಸರ್ಕಾರ ಮಹಿಳೆಯರಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಮಹಿಳೆಯರು ಈ ಸೌಲಭ್ಯ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಲ ಅಭಿಯಂತರ ನಾಗರಾಜ ಎಂ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಿ.ಎಂ.ಕುಸುಮ್ ಬಿ ಯೋಜನೆ ಅಡಿ ಸೋಲಾರ್ ಪಂಪ್ ಸೆಟ್, ಹೊಸ ಬೋರ್ ವೆಲ್ ಹಾಕಿಸಲು ಸರ್ಕಾರ ವಿಶೇಷ ಯೋಜನೆ ಜಾರಿಗೆ ಮಾಡಿದೆ ಎಂದು ರೈತರಿಗೆ ತಿಳಿಸಿದರು.
ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಬಿರಾದಾರ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಎಲ್ಲರೂ ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಈ ಗ್ರಾಮದ ಮಹಿಳೆ ಎಲ್ಐಸಿ ಪಾಲಿಸಿ ಮಾಡಿಸಿ ತನ್ನ ಮಕ್ಕಳಿಗಾಗಿ ಬಳಕೆ ಮಾಡಿಕೊಂಡಿರುವುದು ನಿಜವಾಗಲೂ ಈ ಸರ್ಕಾರದ ಯೋಜನೆ ಶ್ಲಾಘನೀಯ ಎಂದು ಹೇಳಿದರು.ಮಂಗಳೂರು ಗ್ರಾಮದ ಜ್ಯೋತಿ ಕನಕಪ್ಪ ತಳವಾರ್ ಎಂಬ ಮಹಿಳೆ ಗೃಹಲಕ್ಷ್ಮಿ ಹಣದಿಂದ ತನ್ನ ಮಕ್ಕಳಿಗೆ ಎಲ್ಐಸಿ ಹಣ ತುಂಬಿದ್ದಕ್ಕೆ ತಾಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷರು ಸನ್ಮಾನಿಸಿದರು.
ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ಪಿಡಿಒ ನೀಲಂ ಚಳಗೇರಿ, ಗ್ಯಾರಂಟಿ ಯೋಜನೆ ಸಮಿತಿಯ ಸದಸ್ಯ ಸಂತೋಷ ಮೆಣಸಿನಕಾಯಿ, ಅಮರೇಶ ತಲ್ಲೂರು, ಶ್ರೀಧರ ದೇಸಾಯಿ, ಮಹ್ಮದ್ ಸಿರಾಜುದಿನ್ ಕೊಪ್ಪಳ, ರಾಜೇಶ ಕಾಳಿ, ಸುರೇಶ ಮ್ಯಾಗಳೇಷಿ, ಮಹಾದೇವಿ ಮಾಳೆಕೊಪ್ಪ, ಮಹೇಶ ಯರಾಶಿ, ಸುಮಂಗಲಾ ಕಿರ್ತಿಗೌಡರ್, ಬಸವರಾಜ ಮಠದ, ಭೀಮಣ್ಣ ಕುಂಡಿ, ಪ್ರಕಾಶ ಕಮತರ, ವಜೀರಸಾಬ್ ತಳಕಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.