ದೇಶದ ಅಭಿವೃದ್ದಿ ಶಿಕ್ಷಣದಿಂದ ಮಾತ್ರ ಸಾಧ್ಯ

KannadaprabhaNewsNetwork | Published : Aug 5, 2024 12:35 AM

ಸಾರಾಂಶ

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ದೇಶದ ಅಭಿವೃದ್ದಿಗೆ ಮುಂದಾಗಬೇಕೆಂದು ಬೆಂಗಳೂರಿನ ಅಸಿಸ್ಟೆಂಟ್ ಕಮಿಷನರ್ ಆಫ್ ಸೆಂಟ್ರಲ್ ಟ್ಯಾಕ್ಸ್ ಕಸ್ಟಮ್ಸ್‌ನ ಸೌತ್ ಕಮಿಷನರೇಟ್ ಎನ್. ಜೆ. ರವಿಶೇಖರ್ ತಿಳಿಸಿದರು

ಕನ್ನಡಪ್ರಭ ವಾರ್ತೆ ತಿಪಟೂರು

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ದೇಶದ ಅಭಿವೃದ್ದಿಗೆ ಮುಂದಾಗಬೇಕೆಂದು ಬೆಂಗಳೂರಿನ ಅಸಿಸ್ಟೆಂಟ್ ಕಮಿಷನರ್ ಆಫ್ ಸೆಂಟ್ರಲ್ ಟ್ಯಾಕ್ಸ್ ಕಸ್ಟಮ್ಸ್‌ನ ಸೌತ್ ಕಮಿಷನರೇಟ್ ಎನ್. ಜೆ. ರವಿಶೇಖರ್ ತಿಳಿಸಿದರು.

ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ವರ್ಷದ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಲ್ಲಿಯೇ ಅಂಧ ಶ್ರದ್ಧೆ ಬಿಟ್ಟು ಶಿಸ್ತು, ಸಂಯಮ ಬೆಳೆಸಿಕೊಂಡು ಉನ್ನತ ಶಿಕ್ಷಣ ಪಡೆದು ಮಾದರಿ ಪ್ರಜೆಗಳಾಗಬೇಕು. ಕನಸುಗಳನ್ನು ಬೆನ್ನಟ್ಟಿ ತಾನು ಅಂದುಕೊಂಡ ಗುರಿ ಸಾಧಿಸಿ ಹೆತ್ತವರಿಗೆ, ಶಿಕ್ಷಣ ಸಂಸ್ಥೆಗೆ ಕೀರ್ತಿ ತರಬೇಕು. ಶಿಕ್ಷಣವನ್ನು ಕೇವಲ ಉದ್ಯೋಗಕ್ಕೆ ಸೀಮಿತವಾಗಿಸಿಕೊಳ್ಳದೇ ನಾಲ್ಕಾರು ಜನರಿಗೆ ಸಹಾಯ ಮಾಡುವಂತಹ ಮನೋಗುಣವನ್ನು ಬೆಳೆಸಿಕೊಳ್ಳಬೇಕು. ಭಿಕ್ಷುಕನಿಂದಿಡಿದು ಶ್ರೀಮಂತರೂ ಸಹ ತೆರಿಗೆ ಪಾವತಿಸುತ್ತಿದ್ದು ಒಂದು ತಿಂಗಳಲ್ಲಿ ಒಂದು ಲಕ್ಷದ ೭೦ಸಾವಿರ ಕೋಟಿ ರು. ತೆರಿಗೆ ಸಂಗ್ರಹವಾಗುತ್ತಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ತೆರಿಗೆಯನ್ನು ಕಟ್ಟುತ್ತಿದ್ದಾರೆ ಎಂದು ತೆರಿಗೆ ಬಗ್ಗೆ ಮಾಹಿತಿ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಅಥ್ಲೆಟಿಕ್ಸ್ ಕೋಚ್ ಎಂ.ಆರ್. ಶಿವಪ್ರಸಾದ್ ಮಾತನಾಡಿ, ಯುವಜನರಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ನಿರಾಸಕ್ತಿ ಹೆಚ್ಚಾಗಿದ್ದು ದೇಶದಲ್ಲಿ ೧೫೦ಕೋಟಿ ಜನಸಂಖ್ಯೆಯಿದ್ದರೂ ಓಲಂಪಿಕ್‌ನಲ್ಲಿ ಕೇವಲ ೧೬೭ಜನರು ಮಾತ್ರ ಭಾಗವಹಿಸಿರುವುದು ನೋವಿನ ಸಂಗತಿ. ಯುವ ಪೀಳಿಗೆ ಕ್ರೀಡಾಭಿಮಾನ ಬೆಳೆಸಿಕೊಂಡು ರಾಷ್ಟ್ರ, ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆ ಮಾನಸಿಕ, ದೈಹಿಕ ಸದೃಢತೆಗೆ ಸಹಕಾರಿಯಾಗಿದ್ದು ಪಠ್ಯದ ಜೊತೆಗೆ ಕ್ರೀಡೆಯಲ್ಲಿಯೂ ಮುಂದೆ ಬರಬೇಕು. ಕ್ರೀಡಾಪಟುಗಳಿಗೆ ಉದ್ಯೋಗವಕಾಶದಲ್ಲಿ ಶೇ.೨ರಷ್ಟು ಮೀಸಲಾತಿಯನ್ನು ಕಲ್ಪಿಸಕೊಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೂ ಸಹ ಕ್ರೀಡೆಗೆ ಉತ್ತೇಜನ ನೀಡುತ್ತಿದೆ ಎಂದರು. ಕೆವಿಎಸ್ ಉಪಾಧ್ಯಕ್ಷ ಬಿ.ಎಸ್. ಉಮೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಒಳ್ಳೆಯ ಆಲೋಚನೆ, ಚಿಂತನೆಗಳನ್ನು ಬೆಳೆಸಿಕೊಂಡು ತಮ್ಮ ಗುರಿಯನ್ನು ತಲುಪಬೇಕು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಕಾಲೇಜಿಗೆ, ಸಂಸ್ಥೆಗೆ ಹಾಗೂ ತಂದೆತಾಯಿಗಳಿಗೆ ಒಳ್ಳೆಯ ಹೆಸರು ತಂದುಕೊಡಬೇಕೆಂದರು. ಪ್ರಾಂಶುಪಾಲ ಡಾ. ಜಿ.ಎನ್. ಉಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಕೆವಿಎಸ್ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ನಿವೃತ್ತ ಪ್ರಾಂಶುಪಾಲ ಚನ್ನಬಸಪ್ಪ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾಲೇಜಿನ ವಿಕಾಸ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ಫೋಟೋ ೪-ಟಿಪಿಟಿ೧ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಶೈಕ್ಷಣಿಕ ವರ್ಷದ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಅಸಿಸ್ಟೆಂಟ್ ಕಮಿಷನರ್ ಆಫ್ ಸೆಂಟ್ರಲ್ ಟ್ಯಾಕ್ಸ್ ಕಸ್ಟಮ್ಸ್‌ನ ಸೌತ್ ಕಮಿಷನರೇಟ್ ಎನ್. ಜೆ. ರವಿಶೇಖರ್ ಉದ್ಘಾಟಿಸಿದರು.

Share this article