ಅಭಿವೃದ್ಧಿಗೆ ಗ್ರಹಣ, ಕಾಗದದಲ್ಲಷ್ಟೇ ಕಾಮಗಾರಿ, ಕೋಟ್ಯಂತರ ಹಣ ಪೋಲು!

KannadaprabhaNewsNetwork |  
Published : Jul 30, 2026, 02:00 AM IST
56 | Kannada Prabha

ಸಾರಾಂಶ

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್ ಪ್ರತಿನಿಧಿಸುವ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಗುತ್ತಿಗೆದಾರರ ಜಂಟಿ ನಿರ್ಲಕ್ಷ್ಯದಿಂದಾಗಿ ಸರ್ಕಾರದ ಕೋಟ್ಯಂತರ ರು. ಅನುದಾನ ಪೋಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಟಿ.ನರಸೀಪುರ

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್ ಪ್ರತಿನಿಧಿಸುವ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಗುತ್ತಿಗೆದಾರರ ಜಂಟಿ ನಿರ್ಲಕ್ಷ್ಯದಿಂದಾಗಿ ಸರ್ಕಾರದ ಕೋಟ್ಯಂತರ ರು. ಅನುದಾನ ಪೋಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕ್ಷೇತ್ರದಲ್ಲಿ ಯಾವುದೇ ನೈಜ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳದೆ, ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ ಎಂದು ಕ್ಷೇತ್ರದ ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ, ಸಾರ್ವಜನಿಕರಿಗೆ ಅಗತ್ಯವಿರುವ ಕೆಲಸಗಳನ್ನು ಮಾಡದೆ, ಬೇಡದ ಸ್ಥಳಗಳಲ್ಲಿ ಕೋಟ್ಯಂತರ ರು. ವೆಚ್ಚದ ಕಾಮಗಾರಿ ನಡೆಸುವ ಮೂಲಕ ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ದೂರುಗಳು ಕೇಳಿಬಂದಿವೆ.

ಅನುದಾನ ಬಿಡುಗಡೆಯಾಗಿದ್ದರೂ ಮುಗಿಯದ ಕಾಲಹರಣ:

ಹಾಲಿ ಶಾಸಕ ಡಾ.ಎಚ್.ಸಿ. ಮಹದೇವಪ್ಪ ಅವರು ಸಚಿವರಾಗಿದ್ದ ಅವಧಿಯಲ್ಲಿ, ಸೋಸಲೆ ಹೋಬಳಿಯ ಗ್ರಾಮಗಳ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಕಳೆದ ಎರಡು ವರ್ಷಗಳ ಹಿಂದೆಯೇ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದರು. ಆದರೆ, ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಇಲಾಖೆಯ ಎಇಇ ಹಾಗೂ ಗುತ್ತಿಗೆದಾರ, ಕಾರಣಗಳನ್ನು ನೀಡುತ್ತಾ ಕಾಮಗಾರಿ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ.

ಸೋಸಲೆ ಹೋಬಳಿಯ ಹೊರಳಹಳ್ಳಿ ಹಾಗೂ ದೊಡ್ಡೇಬಾಗಿಲು ಗ್ರಾಮಗಳಲ್ಲಿ ಯಾವುದೇ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಿಲ್ಲ.

ಅನುಮಾನಕ್ಕೆಡೆ ಮಾಡಿದ ಅಧಿಕಾರಿಗಳ ನಡೆ:

ಕ್ಷೇತ್ರದಲ್ಲಿ ಬಿಡುಗಡೆಯಾಗಿರುವ ಸರ್ಕಾರಿ ಅನುದಾನ ಸರಿಯಾಗಿ ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬದನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಾದ ಹಿರಿಯ ಅಧಿಕಾರಿಗಳು ಈ ಪ್ರದೇಶದತ್ತ ಮುಖ ಮಾಡದಿರುವುದು ಸಾರ್ವಜನಿಕರಲ್ಲಿ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಎಸ್ಟಿಮೇಟ್ ಇಲ್ಲದೆ ಕೋಟಿ ಕೋಟಿ ವೆಚ್ಚ. ಅನಗತ್ಯ ತಡೆಗೋಡೆ ನಿರ್ಮಾಣ:

ಜಿಪಂ ಮಾಜಿ ಸದಸ್ಯ ಎಂ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಸೋಸಲೆ ಹೋಬಳಿಯ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ ಶಾಸಕ ಮಹದೇವಪ್ಪನವರು 5.50 ಕೋಟಿ ರು. ಗಳು ಹಾಗೂ ವೃತ್ತಗಳ ನಿರ್ಮಾಣಕ್ಕಾಗಿ ಸುಮಾರು 10 ಕೋಟಿ ರು. ಬಿಡುಗಡೆ ಮಾಡಿಕೊಟ್ಟಿದ್ದಾರೆ. ಹೊರಳಹಳ್ಳಿ ಅಡ್ಡರಸ್ತೆಯಲ್ಲಿ ಯಾವುದೇ ಎಸ್ಟಿಮೇಟ್ ಇಲ್ಲದೆಯೇ 2 ರಿಂದ 3 ಕೋಟಿ ರು. ವೆಚ್ಚದಲ್ಲಿ ಅನಗತ್ಯ ತಡೆಗೋಡೆ ನಿರ್ಮಿಸಲಾಗುತ್ತಿದೆ. ಅದೇ ರೀತಿ ಮುಡುಕುತೊರೆ ಬೆಟ್ಟ ಹಾಗೂ ವಡ್ಗಲ್ಲು ರಂಗನಾಥ ಸ್ವಾಮಿ ದೇವಸ್ಥಾನದ ರಸ್ತೆಗೂ 5 ರಿಂದ 6 ಕೋಟಿ ರು.ಗಳನ್ನು ವಿನಿಯೋಗಿಸಲಾಗುತ್ತಿದೆಯೇ ವಿನಃ, ಜನರು ನಿತ್ಯ ಓಡಾಡುವ ರಸ್ತೆಗಳನ್ನು ಸರಿಪಡಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಉಗ್ರ ಪ್ರತಿಭಟನೆಯ ಎಚ್ಚರಿಕೆ- ಅಭಿವೃದ್ಧಿ ಹೆಸರಿನಲ್ಲಿ ಅನುದಾನ ದುರುಪಯೋಗಪಡಿಸಿಕೊಂಡಿರುವ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಬಾಕಿ ಇರುವ ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವಸ್ಥಾನಗಳ ಹುಂಡಿಗೆ 360 ಡಿಗ್ರಿ ಸಿಸಿಟಿವಿ ಭದ್ರತೆ: ಎಡಿಸಿ ಝುಬೇರ್ ಸೂಚನೆ
ಶ್ರದ್ಧಾ, ಭಕ್ತಿಯಿಂದ ನಡೆದ ಗುರುಪೂರ್ಣಿಮೆ