- 100 ಅಡಿ ಎತ್ತರದ ಶಾಶ್ವತ ಧ್ವಜಗಳು, ಮಹಾಭೋಗ ಕುಂಡದ ನವೀಕೃತ ಮೇಲ್ಛಾವಣಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಂತ ಸೇವಾಲಾಲರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದ ಸುಕ್ಷೇತ್ರ ಭಾಯಗಡ್‌ನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದು ಶ್ರದ್ಧಾಭಕ್ತಿಯ ಸ್ವರೂಪವಾಗಿದೆ ಎಂದು ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು.ಸೂರಗೊಂಡನಕೊಪ್ಪದ ಸುಕ್ಷೇತ್ರ ಭಾಯಗಡ್‌ನಲ್ಲಿ ಶುಕ್ರವಾರ ಸಂತ ಸೇವಾಲಾಲರ ದೇವಸ್ಥಾನ ಮುಂಭಾಗ ಹಾಗೂ ಮರಿಯಮ್ಮದೇವಿ ದೇವಸ್ಥಾನ ಮುಂಭಾಗ 100 ಅಡಿ ಎತ್ತರದ ಶಾಶ್ವತ ಧ್ವಜಗಳು (ಕಾಟಿ), ಮಹಾಭೋಗ ಕುಂಡದ ನವೀಕೃತ ಮೇಲ್ಛಾವಣಿ ಹಾಗೂ ಸಂತ ಸೇವಾಲಾಲರ ಹಾತಿರಾಮಭಾವಜಿ ಕಲಾಕೃತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಶ್ವತ ಧ್ವಜ ಸ್ತಂಭಗಳು, ಮಾಹಾಭೋಗ ಕುಂಡದ ಮೇಲ್ಚಾವಣಿ ನವೀಕರಣ, ಕಲಾಕೃತಿಗಳ ನಿರ್ಮಾಣ ಎಲ್ಲ ಸೇರಿ ಅಂದಾಜು ₹60 ಲಕ್ಷಗಳ ವೆಚ್ಚದ ಕಾಮಗಾರಿಗಳನ್ನು ಈಗ ಉದ್ಘಾಟಿಸಲಾಗಿದೆ. ಭವ್ಯಭಾರತ ದೇಶದಲ್ಲಿ ದೇವಸ್ಥಾನಗಳು, ಮಠಮಾನ್ಯಗಳು ಶಾಂತಿಧಾಮಗಳಾಗಿವೆ. ಒತ್ತಡವನ್ನು ಹಾಗೂ ಮನಸ್ಸಿನ ಖಿನ್ನತೆಗಳನ್ನು ಹೋಗಲಾಡಿಸುವ ಪುಣ್ಯ ಕ್ಷೇತ್ರಗಳಾಗಿವೆ. 1 ಗಂಟೆ ಪುಣ್ಯ ಕ್ಷೇತ್ರಗಳಲ್ಲಿ ಕುಳಿತು ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಮನಸ್ಸಿನ ತೊಳಲಾಟ ಹೊರಟು ಹೋಗಿ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ, ಮಹಾಮಠ ಸಮಿತಿ ಧರ್ಮದರ್ಶಿ ಹೀರಾನಾಯ್ಕ, ಮಹಾಮಠ ನಿರ್ವಹಣ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ, ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಮಾರುತಿ ನಾಯ್ಕ, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಮುಖಂಡರಾದ ಭೂಪಾಲ ನಾಯ್ಕ, ಸುರೇಶ್, ಭೋಜ್ಯಾನಾಯ್ಕ, ಗೋಪಾಲನಾಯ್ಕ, ಪೀರ‍್ಯಾನಾಯ್ಕ, ಯಂಕ್ಯಾನಾಯ್ಕ, ಗಿರೀಶ್ ಇತರರು ಇದ್ದರು.
-4ಎಚ್.ಎಲ್.ಐ2.ಜೆಪಿಜಿ: