ಗ್ಯಾರಂಟಿ ಹೆಸರಿನಲ್ಲಿ ಗಾಳಿಗೋಪುರ: ವಿಜಯೇಂದ್ರ

KannadaprabhaNewsNetwork |  
Published : Sep 06, 2026, 02:15 AM IST
ವಿಜಯೇಂದ್ರ | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಗಾಳಿಯಲ್ಲಿ ಗೋಪುರ ಕಟ್ಟಿದೆ. ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಯೋಜನೆಗಳ ಪ್ರಚಾರವನ್ನೇ ಮಾಡುತ್ತಿದೆ. ಇದು ಜನಪ್ರಿಯ ಸರ್ಕಾರವಲ್ಲ, ಜಾಹೀರಾತು ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಕಾರಟಗಿ:

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಗಾಳಿಯಲ್ಲಿ ಗೋಪುರ ಕಟ್ಟಿದೆ. ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಯೋಜನೆಗಳ ಪ್ರಚಾರವನ್ನೇ ಮಾಡುತ್ತಿದೆ. ಇದು ಜನಪ್ರಿಯ ಸರ್ಕಾರವಲ್ಲ, ಜಾಹೀರಾತು ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಹಮ್ಮಿಕೊಂಡ ಬಳ್ಳಾರಿ ಚಲೋ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸರಕಾರದ ವಿರುದ್ಧ ನಡೆದ ಈ ಹೋರಾಟ ಜನಾಂದೋಲನವಾಗಿ ಪರಿವರ್ತನೆಯಾಗಿದೆ. ಜನಸಾಮಾನ್ಯರೂ ಸ್ವಯಂಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ಕಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಭಯ ಹುಟ್ಟಿ, ಹತಾಶೆಯಾಗಿದೆ ಎಂದರು. ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಬರ ಪರಿಸ್ಥಿತಿ ವೀಕ್ಷಣೆ ಮಾಡುವುದು ಸರಿಯಲ್ಲ. ಇದೇ ಮೊದಲ ಬಾರಿಗೆ ಅವರು ಹಸಿರು ಶಾಲು ಹಾಕಿಕೊಂಡು ಉತ್ತರ ಕರ್ನಾಟಕ ಭಾಗಕ್ಕೆ ಬಂದಿದ್ದಾರೆ. ಇದು ನಮ್ಮ ಪಾದಯಾತ್ರೆಗೆ ಸಿಕ್ಕ ದೊಡ್ಡ ಜಯ. ಬಿಜೆಪಿ ಹಮ್ಮಿಕೊಂಡಿರುವ ಹೋರಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಜನರ ಸಮಸ್ಯೆಗಳಿಗೆ ಧ್ವನಿಯಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಹಾಗೂ ಮುಖ್ಯಮಂತ್ರಿಯವರು ನಮಗೆ ವಾರ್ನಿಂಗ್‌ ನೀಡಿದ್ದಾರೆ. ಆದರೆ, ನಾವು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಅಗೌರವದ ಮಾತು ಆಡಿಲ್ಲ. ನಾನು ಇನ್ಮುಂದೆ ಅವರನ್ನು ಸನ್ಮಾನ್ಯ ಮುಖ್ಯಮಂತ್ರಿಗಳೇ ಎಂದು ಕರೆಯುತ್ತೇನೆ, ಗ್ಯಾರಂಟಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ಗಾಳಿಗೋಪುರ ಕಟ್ಟುತ್ತಿರುವುದಕ್ಕೆ ಕಾರಣಗಳಿವೆ. ಗೃಹಲಕ್ಷ್ಮಿ ಯೋಜನೆಯ ₹5 ಸಾವಿರ ಕೋಟಿ ಹಣದ ಬಗ್ಗೆ ಇನ್ನೂ ಸ್ಪಷ್ಟನೆ ಬಂದಿಲ್ಲ. ಈ ವಿಚಾರ ಸಿಎಜಿ ವರದಿಯಲ್ಲಿಯೂ ಉಲ್ಲೇಖವಾಗಿದೆ ಎಂದರು.

ಶಕ್ತಿ ಯೋಜನೆಯ ಬಗ್ಗೆ ಸರ್ಕಾರ ನಿರಂತರವಾಗಿ ಜಾಹೀರಾತು ನೀಡುತ್ತಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಬಸ್‌ ಸೌಲಭ್ಯವಿಲ್ಲ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಲವು ಕಡೆ ಬಸ್‌ಗಳ ಕೊರತೆಯಿಂದ ಮಕ್ಕಳು ಶಾಲಾ-ಕಾಲೇಜಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದರು.

ಅನ್ನಭಾಗ್ಯದಲ್ಲಿ ಘೋಷಿಸಿದ 10 ಕೆ.ಜಿ. ಅಕ್ಕಿಯ ಯೋಜನೆ ಐದು ಕೆ.ಜಿ.ಗೆ ಸೀಮಿತವಾಗಿದೆ. ರಾಜ್ಯದಲ್ಲಿ ಜನರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬಡವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ. ರೈತರು, ಬಡವರು ಮತ್ತು ವಿಕಲಚೇತನರಿಗೆ ಅನ್ಯಾಯವಾಗುತ್ತಿದೆ. ಹಾಲಿನ ಸಹಾಯಧನವನ್ನೂ ನಿಲ್ಲಿಸಲಾಗಿದೆ ಎಂದು ವಿಜಯೇಂದ್ರ ದೂರಿದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸುವ ನೆಪದಲ್ಲಿ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಲಾಗಿದೆ. ಗಲ್ಲಿ, ಗಲ್ಲಿಯಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆ ಮೂಲಕ ಬಡವರ ಹಣವನ್ನು ದೋಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬಿಜೆಪಿ ಸರ್ಕಾರ ಇದಕ್ಕಿಂತ ಉತ್ತಮವಾದ ಗ್ಯಾರಂಟಿಗಳನ್ನು ನೀಡಿತ್ತು. ನಮ್ಮ ಅಧಿಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಆದರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಯುವಕರಿಗೆ ಉದ್ಯೋಗ ನೀಡುವ ಕೆಲಸ ನಡೆದಿಲ್ಲ. 2.5 ಲಕ್ಷ ಹುದ್ದೆಗಳ ನೇಮಕಾತಿ ಮಾಡಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆಯೇ ಎಂಬುದರ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ತಂಗಡಗಿ ಅವರು ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ಬಗ್ಗೆ ಮಾತನಾಡುವಾಗ ಮೊದಲು ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ತಿರುಗೇಟು ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಷಡ್ಯಂತ್ರ ಹಾಗೂ ಕುತಂತ್ರ ನಡೆಸಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಕೆಲಸಗಳಿಗೆ ಅಲೆದಾಟ ತಪ್ಪಲಿದೆ
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಗಣನೀಯ ಪ್ರಗತಿ