ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕ್ಷೇತ್ರದಲ್ಲಿ ₹150 ಕೋಟಿ ಅನುದಾನದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಜನರಲ್ ಬೀದಿಯಲ್ಲಿ ₹50 ಲಕ್ಷ ರು.ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ವಿಪಕ್ಷದವರು ಸುಖಾ ಸುಮ್ಮನೇ ಟೀಕೆ ಮಾಡುತ್ತಿದ್ದಾರೆ ಎಂದರು. ನಾನು ಶಾಸಕನಾದ ಮೇಲೆ ಹತ್ತಿ ಮಾರುಕಟ್ಟೆ ₹6 ಕೋಟಿ, ಗರಗನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ₹22 ಕೋಟಿ, ಬೊಮ್ಮನಹಳ್ಳಿ ಅಂಬೇಡ್ಕರ್ ವಸತಿ ಶಾಲೆ ₹22 ಕೋಟಿ, ಸಿಎಂ ವಿಶೇಷ ಅನುದಾನ ₹25 ಕೋಟಿ, ವಾಲ್ಮೀಕಿ ಭವನ ₹1 ಕೋಟಿ, ಕನಕ ಭವನ ₹75 ಲಕ್ಷ, ಲೋಕೋಪಯೋಗಿ ಇಲಾಖೆ ₹10 ಕೋಟಿ, ಮತ್ತೆ 10 ಕೋಟಿ ಅನುದಾನ ಬಿಡುಗಡೆ ಹಂತದಲ್ಲಿದೆ, ಎಸ್‌ಇಪಿ, ಟಿಎಸ್‌ಪಿ ಸೇರಿದಂತೆ ₹150 ಕೋಟಿಯಷ್ಟು ಅನುದಾನದಲ್ಲಿ ಕೆಲಸಗಳು ನಡೆಯುತ್ತಿವೆ ಎಂದರು.ನಾನು ಸುಳ್ಳು ಹೇಳುತ್ತಿಲ್ಲ. ಸತ್ಯ ಹೇಳುತ್ತಿದ್ದೇನೆ ₹800ಕೋಟಿ ಅನುದಾನ ಬಂದ ಬಗ್ಗೆ ಅನುಮಾನವಿದೆ. 800 ಕೋಟಿಯಲ್ಲಿ ಬಹುತೇಕ ಕಟ್ಟಡಗಳು ಪೂರ್ಣವಾಗಿಲ್ಲ. ನಾನು ಅವರ ಕಾಲದಲ್ಲಿ ಮಂಜೂರಾದ ಕಾಮಗಾರಿ ಬದಲಿಸಿಲ್ಲ ಎಂದರು.ದಲಿತ ವಿರೋಧಿ ಯಾರು?:
ಬೇಗೂರು ಬಳಿಯ ಸವಕನಹಳ್ಳಿ ಪಾಳ್ಯದಲ್ಲಿ ಸಿದ್ದಪ್ಪಾಜಿ ಕೊಂಡೋತ್ಸವದಲ್ಲಿ ಗಾಯಗೊಂಡ ದಲಿತರ ಭೇಟಿ ಮಾಡಿ ಸಾಂತ್ವನ ಹೇಳಿದ್ದು, ನನ್ನನ್ನು ದಲಿತ ವಿರೋಧಿ ಎನ್ನುತ್ತಿದ್ದೀರಲ್ಲ, ನೀವು ಹೋಗಿ ಗಾಯಾಳಗಳ ಭೇಟಿ ಮಾಡಿದ್ರಾ ಎಂದು ಚುಚ್ಚಿದರು. ನಾನು ಶಾಸಕನಾದ ಬಳಿಕ ನೂರಾರು ಕೋಟಿಗಳ ಅನುದಾನ ಬಂದಿದೆ. ಅಲ್ಲದೆ ಕೋಟ್ಯಂತರ ರು.ಗ್ಯಾರಂಟಿ ಯೋಜನೆಯಲ್ಲಿ ಕ್ಷೇತ್ರದ ಜನ ಪಡೆಯುತ್ತಿದ್ದಾರೆ. ಇದನ್ನು ಸಹಿಸದ ವಿಪಕ್ಷದ ಕೆಲವರು ವಿನಾಕಾರಣ ಮಾತನಾಡುತ್ತಿದ್ದಾರೆ ಇದಕ್ಕೆಲ್ಲ ಜನರು ತಲೆ ಕೆಡಿಸಿಕೊಳ್ಳಬೇಡಿ ಎಂದರು.ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು ಮಾತನಾಡಿ, ಶಾಸಕ ಗಣೇಶ್ ಪ್ರಸಾದ್ ನಿರಂತರ ಜನ ಸೇವೆಗೆ ಕ್ಷೇತ್ರದ ಮತದಾರರು ನಿರೀಕ್ಷೆಗೂ ಮೀರಿ ಬೆಂಬಲಿಸಿದ್ದಾರೆ. ಶಾಸಕರ ಸೇವೆ ಹೀಗೆ ಮುಂದುವರೆಯಲಿ ಎಂದು ಸಲಹೆ ನೀಡಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಅರ್.ಮಹದೇವಸ್ವಾಮಿ ಮಾತನಾಡಿ, ಶಾಸಕರು ಗ್ರಾಮಸ್ಥರ ಬೇಡಿಕೆ ಇಲ್ಲದಿದ್ದರೂ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಗ್ರಾಪಂ ಅಧ್ಯಕ್ಷೆ ಜಯಮ್ಮ, ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಮಹದೇವಶೆಟ್ಟಿ, ಡೇರಿ ಅಧ್ಯಕ್ಷ ಬಿ.ಎಂ.ಮಹದೇವಪ್ಪ, ಗ್ರಾಮದ ಪ್ರಮುಖರಾದ ಬಿ.ಕೆ.ರೇವಣ್ಣ, ಬಿ.ಎಸ್.ಶಿವರುದ್ರಪ್ಪ, ಗೌಡಿಕೆ ಶಿವಣ್ಣ,ಬಿ.ಎಸ್.ಪಂಚಾಕ್ಷರಿ, ಅರ್ಚಕ ಚಂದ್ರಪ್ಪ, ರವಿ ನಟೇಶ್, ಡೇರಿ ಮಹೇಶ್, ಕೂಶಣ್ಣಶೆಟ್ಟಿ, ಶಿವಯ್ಯ, ರಾಜುಗೌಡ, ಬಸವಯ್ಯ, ಕೆಆರ್ ಐಡಿಎಲ್‌ನ ಎಇಇ ಪ್ರಸನ್ನ ಕುಮಾರ್ ಹಾಗು ಬಂಗಾರು ಸೇರಿದಂತೆ ಗ್ರಾಮಸ್ಥರು ಇದ್ದರು.ನಿರಂಜನ್‌ಕುಮಾರ್‌ಗೆ ಪ್ರತಿಭಟನೆ
ಮಾಡಲು ಯಾವ ನೈತಿಕೆಯೂ ಇಲ್ಲಚಾಮರಾಜನಗರ ವಿವಿ ಮುಚ್ಚಲು ಮುಂದಾದರೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಲು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್‌ಗೆ ಯಾವ ನೈತಿಕೆಯೂ ಇಲ್ಲ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಕನ್ನಡಪ್ರಭದೊಂದಿಗೆ ಮಾತನಾಡಿ, ಮಾಜಿ ಶಾಸಕರ ಕಾಲದಲ್ಲಿ ತಾಲೂಕಿನ ತೆರಕಣಾಂಬಿ ಪ್ರಥಮ ದರ್ಜೆ ಕಾಲೇಜು ಉಳಿಸಿಕೊಳ್ಳಲು ಆಗಲಿಲ್ಲ. ಈಗ ವಿವಿ ಮುಚ್ಚಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ತೆರಕಣಾಂಬಿ ಪ್ರಥಮ ದರ್ಜೆ ಕಾಲೇಜು ಮುಚ್ಚಿಸಿದ್ದು ನಿಮ್ಮ ಸರ್ಕಾರದ ಕಾಲದಲ್ಲಿ ಕಾಲೇಜು ಮುಚ್ಚಿದ್ದಕ್ಕೆ ರೈತಸಂಘದ ಶಾಂತಮಲ್ಲಪ್ಪ, ಸ್ಥಳೀಯ ಕಾಂಗ್ರೆಸ್ಸಿಗರು ಹಾಗೂ ಗ್ರಾಮಸ್ಥರು ಹೋರಾಟ ನಡೆಸಿದ್ದು ಮರೆತು ಹೋಗಿದೆಯಾ ಎಂದರು. ತೆರಕಣಾಂಬಿ ಗ್ರಾಮಸ್ಥರು, ರೈತಸಂಘ, ಕಾಂಗ್ರೆಸ್ ಮುಖಂಡರು ಅಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಅಶ್ವಥ್‌ನಾರಾಯಣರ ಭೇಟಿ ಮಾಡಿದಾಗ ಏನು ಹೇಳಿದ್ರೂ ಎಂಬುದನ್ನು ಮಾಜಿ ಶಾಸಕರು ನೆನಪಿಸಿಕೊಳ್ಳಬೇಕು ಎಂದು ಹರಿ ಹಾಯ್ದರು.ಮೈಸೂರು ವಿವಿಗೆ ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ 60 ಕಿಮೀ ದೂರವಿದೆ. ಹನೂರು 75 ಕಿಮೀ ದೂರವಿದೆ. ಮೈಸೂರು ವಿವಿಗೆ ಹೋಗಲು ತೊಂದರೆ ಏನು ಇಲ್ಲ ಎಂದರು. ಚಾಮರಾಜನಗರ ವಿವಿ ಮುಚ್ಚಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಬಿಜೆಪಿಗರು ಪ್ರತಿಭಟನೆ ನಡೆಸಿದರೆ ನಾವು ಬಿಜೆಪಿಗರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.