ಗದಗ 26ನೇ ವಾರ್ಡಿನ ಕಮ್ಮಾರ ಸಾಲು ಪ್ರದೇಶದ ಅರಸಿದ್ಧಿ ಅಂಗಡಿಯಿಂದ ಜನತಾ ಬಜಾರ ವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ವಾರ್ಡಿನ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಗದಗ: ರಾಜ್ಯದಲ್ಲಿ ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಆಡಳಿತವಿದ್ದಾಗ ಗದಗ-ಬೆಟಗೇರಿ ನಗರಸಭೆಗೆ ಸಾಕಷ್ಟು ಅನುದಾನ ಮಂಜೂರಾಗಿದ್ದು, ಹಲವಾರು ಅಭಿವೃದ್ಧಿಪರ ಕಾರ್ಯಗಳಾಗಿವೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ 26ನೇ ವಾರ್ಡಿನ ಕಮ್ಮಾರ ಸಾಲು ಪ್ರದೇಶದ ಅರಸಿದ್ಧಿ ಅಂಗಡಿಯಿಂದ ಜನತಾ ಬಜಾರ ವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ವಾರ್ಡಿನ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು ವಿಶೇಷ ಕಾಳಜಿ ವಹಿಸಿ ಗದಗ-ಬೆಟಗೇರಿ ಅವಳಿ ನಗರಕ್ಕೆ ನಗರೋತ್ಥಾನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದರು. ಕಾರಣಾಂತರದಿಂದ ಯೋಜನೆಗಳು ಅನುಷ್ಠಾನಗೊಂಡಿರಲಿಲ್ಲ. ಇದೀಗ ಈ ವಾರ್ಡಿನ ನಗರಸಭೆ ಸದಸ್ಯೆ ಹುಲಿಗೆಮ್ಮ ಹಬೀಬ ಅವರು ಆಸಕ್ತಿ ವಹಿಸಿ ಈ ಪ್ರದೇಶದ ರಸ್ತೆ, ಚರಂಡಿ ಕೆಲಸ ಆಗುವಂತೆ ಮಾಡಿದ್ದಾರೆ ಎಂದರು.
ನಗರಸಭೆ ಸದಸ್ಯೆ ಹುಲಿಗೆಮ್ಮ ಹಬೀಬ ಮಾತನಾಡಿ, ವಾರ್ಡಿನಲ್ಲಿ ವಿವಿಧೆಡೆ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ ನಗರೋತ್ಥಾನ 4ನೇ ಹಂತದಿಂದ ₹48 ಲಕ್ಷ ಜನರಲ್ ಫಂಡ್‌ನಿಂದ ₹28 ಲಕ್ಷ, 15ನೇ ಹಣಕಾಸು ಅನುದಾನದಿಂದ ₹7 ಲಕ್ಷ ಹಾಗೂ ಎಸ್‌ಎಫ್‌ಸಿ ಅನುದಾನದಿಂದ ₹9 ಲಕ್ಷ ಕಾಮಗಾರಿಯನ್ನು ಹಂತ ಹಂತವಾಗಿ ಮಾಡಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಕ್ಕೆ ವಾರ್ಡಿನ ಜನರು ಸಹಕಾರ ನೀಡಬೇಕು ಎಂದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜಗನ್ನಾಥಸಾ ಭಾಂಡಗೆ ಹಾಗೂ ಭೀಮಸಿಂಗ್ ರಾಠೋಡ್ ಮಾತನಾಡಿದರು.
ಬಸವರಾಜ ಕುರಗೋಡ, ವಿಜಯ ಸೋಳಂಕಿ, ಸಿದ್ದು ಪವಾರ, ಕೀರ್ತಿ ಕಾಂಬಳೇಕರ, ವಿಜಯ ಬನಹಟ್ಟಿ, ಗೋಪಾಲ ಪವಾರ, ಸುರೇಶ ಚವಾಣ, ಬಡಿಗಣ್ಣವರ, ಅರಸಿದ್ಧಿ, ಭೂಸ್ತ ಸೇರಿದಂತೆ ಮುಂತಾದವರು ಇದ್ದರು. ರಾಘವೇಂದ್ರ ಹಬೀಬ ಸ್ವಾಗತಿಸಿದರು. ರಮೇಶ ಸಜ್ಜಗಾರ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.