ರಾಮನಗರ: ಮನುಷ್ಯನ ಮನಸ್ಸಿನಲ್ಲಿ ಹುದುಗಿರುವ ದ್ವೇಷ ಕಳೆದು, ಪ್ರೀತಿ ಹುಟ್ಟಿಸುವ ಪವಿತ್ರ ರಂಜಾನ್ ಹಬ್ಬವನ್ನು ರೇಷ್ಮೆ ನಗರಿ ರಾಮನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ, ಸಡಗರದಿಂದ ಆಚರಿಸಿದರು.
ಎಲ್ಲ ಧರ್ಮದಲ್ಲಿಯೂ ಉಪವಾಸಕ್ಕೆ ಪ್ರಾಮುಖ್ಯತೆ ಮತ್ತು ವಿಶೇಷತೆ ಇದೆ. ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಮತ್ತು ಸರಳ ಜೀವನವನ್ನು ಉತ್ತೇಜಿಸುತ್ತದೆ. ಮನುಷ್ಯನ ಅಂತಃಶುದ್ಧಿಗೆ ಹಾಗೂ ಪಾಪ ಪರಿಹಾರಕ್ಕೆ ಉಪವಾಸ ಉತ್ತಮ ಮಾರ್ಗ. ಹೀಗಾಗಿ ರಂಜಾನ್ ಮಾಸದಲ್ಲಿ ಪ್ರತಿಯೊಬ್ಬಮುಸ್ಲಿಮರು ಬಡವ-ಬಲ್ಲಿದ ಎನ್ನದೆ ಉಪವಾಸ ಆಚರಿಸುತ್ತಾರೆ.
ಒಂದು ತಿಂಗಳ ಕಾಲ ಶ್ರದ್ದಾಭಕ್ತಿಯಿಂದ ಉಪವಾಸ ನಡೆಸಿದ ಮುಸಲ್ಮಾನ ಬಂಧುಗಳು ಉಪವಾಸ ಅಂತ್ಯಗೊಳಿಸಿ ರಂಜಾನ್ ಆಚರಿಸಿದರು. ಹೊಸ ಉಡುಗೆ ತೊಟ್ಟು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ರಂಜಾನ್ ಪ್ರಯುಕ್ತ ನಡೆದ ಸಾಮೂಹಿಕ ನಮಾಜ್ ವೇಳೆ ಮುಸಲ್ಮಾನರು ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಧರ್ಮಗುರುಗಳು, ಇಸ್ಲಾಂ ಎಂದರೆ ಶಾಂತಿ, ಪ್ರೇಮ, ಸ್ನೇಹದ ಪ್ರತೀಕವಾಗಿದೆ. ಪ್ರವಾದಿ ಮಹ್ಮದ ಪೆಗಂಬರರ ಸಂದೇಶಗಳು ಮುಸ್ಲಿಂ ಸಮಾಜದ ಉಸಿರಾಗಿವೆ. ಎಲ್ಲ ಧರ್ಮದವರನ್ನು ಪ್ರೀತಿಸುವುದು ಮುಸಲ್ಮಾನರ ಬದುಕಿನ ಮುಖ್ಯ ಅಂಗವಾಗಿದೆ. ಸರ್ವ ಧರ್ಮೀಯರ ಜತೆ ಎಲ್ಲ ಸಮುದಾಯ ಜನರನ್ನು ಸ್ನೇಹ, ಸಹೋದರತೆಯಿಂದ ಬಾಳುವುದೇ ನಿಜವಾದ ಮುಸ್ಲಿಂನಾಗಿರುತ್ತಾನೆ. ಮತ್ತೊಬ್ಬರಿಗೆ ಸಹಾಯ, ಸಹಕಾರ ನೀಡುವುದು ಇಸ್ಲಾಂ ಧರ್ಮಾಚರಣೆ ಮುಖ್ಯಧ್ಯೇಯವಾಗಿದೆ ಎಂದು ಹೇಳಿದರು.
ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದವರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ವಿಶೇಷ ಬಂದೋಬಸ್ತ್ ಕೈಗೊಂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಬಂದೋ ಬಸ್ತ್ ನ ಮೇಲ್ವಿಚಾರಣೆ ನಡೆಸಿದರು.
ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸಿದರು. ಮಾಗಡಿ ಪಟ್ಟಣದ ಕಲ್ಯಾಗೇಟ್ ಬಳಿ ಇರುವ ದರ್ಗಾದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಂಡರು.
ಕನಕಪುರ ವರದಿ:
ಇಲ್ಲಿನ ನಮಾಜಿ ಬೋರೆಯ ಈದ್ಗಾ ಪ್ರದೇಶದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಪ್ರಧಾನ ಇಮಾಂ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯ ಕೋರಿದರು. ರಂಜಾನ್ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದವರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಅನ್ನು ತಾಲೂಕಿನ ಮುಸ್ಲಿಂ ಬಾಂಧವರು ಶ್ರದ್ದಾಭಕ್ತಿ, ಸಂಭ್ರಮ ಸಡಗರದಿಂದ ಆಚರಿಸಿದರು. ನಗರದ ಕೋಟೆಯ ಈದ್ದಾ ಮೈದಾನ, ಮೆಹೆದವಿಯ ಈದ್ಗಾ ಮೈದಾನಗಳಲ್ಲಿ ಜಮಾಯಿಸಿದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗ ವಹಿಸಿದ್ದರು. ಮಕ್ಕಳು, ಯುವಕರು, ವೃದ್ಧರು ಸೇರಿ ದಂತೆ ಎಲ್ಲ ವಯೋಮಾನದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಕಳೆದ 30 ದಿನಗಳಿಂದ ಪ್ರತಿನಿತ್ಯ ಉಪವಾಸ ಪ್ರಾರ್ಥನೆ ನಡೆಸಿದ್ದ ಮುಸ್ಲಿಂ ಬಾಂಧವರು ಶನಿವಾರ ರಂಜಾನ್ ಪ್ರಯುಕ್ತ ಉಪವಾಸ ಬಿಟ್ಟು ಹೊಸಬಟ್ಟೆ ತೊಟ್ಟು ಸಂಭ್ರಮದಿಂದ ರಂಜಾನ್ ಹಬ್ಬವನ್ನು ಆಚರಿಸಿದರು.
ತಾಲೂಕಿನ ಹೊಂಗನೂರು, ಕೋಡಂಬಹಳ್ಳಿ, ಎಂ.ಕೆ. ದೊಡ್ಡಿ ಗ್ರಾಮಗಳಲ್ಲಿ ಸಹ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳ ಬಳಿ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸಾಮೂಹಿಕ ಪ್ರಾರ್ಥನೆಯ ವೇಳೆ ಇದ್ದಾ ಮೈದಾನಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಬಾಕ್ಸ್ .....................
ಶಾಸಕ ಇಕ್ಬಾಲ್ ಹುಸೇನ್ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯರಾಮನಗರ:
ನಗರದ ಎಪಿಎಂಸಿ ಬಳಿಯಿರುವ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಮುಸ್ಲಿಂ ಬಾಂಧವರೊಂದಿಗೆ ಶಾಸಕ ಇಕ್ಸಾಲ್‌ಹುಸೇನ್ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.ಈ ವೇಳೆ ಮಾತನಾಡಿದ ಇಕ್ಸಾಲ್ ಹುಸೇನ್, ನಿಮ್ಮೆಲ್ಲರ ಆಶೀರ್ವಾದದ ಕಾರಣ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಶಾಸಕನಾಗುವುದಕ್ಕೂ ಮೊದಲು ನಗರ ಸೇರಿದಂತೆ ಕ್ಷೇತ್ರದೆಲೆಡೆ ಕುಡಿಯುವ ನೀರು, ರಸ್ತೆ , ಚರಂಡಿ ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆ ಸಾಕಷ್ಟಿತ್ತು. ಈಗ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರು ವಾಸಿಸುತ್ತಿರುವ ಬಡಾವಣೆಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 50 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದೆ. ಬಕ್ಷಿ ಕೆರೆ ದುರಸ್ತಿ ಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಒಂದು ವರ್ಷದೊಳಗೆ ನಗರದ ಪ್ರತಿಯೊಂದು ರಸ್ತೆಗಳು ಕಾಂಕ್ರಿಟ್, ಡಾಂಬರೀಕರಣಗೊಳ್ಳಲಿದೆ ಎಂದು ತಿಳಿಸಿದರು.ಆಶ್ರಯ ಯೋಜನೆ ಅಡಿಯಲ್ಲಿ ಬಡವರಿಗೆ ನಿವೇಶನ ಮತ್ತು ಮನೆ ನಿರ್ಮಿಸಿಕೊಡುವ ಕಾರ್ಯವೂ ನಡೆದಿದೆ. ಇದಕ್ಕಾಗಿ 100 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ನಿವೇಶನ ವಿತರಣೆ ಮಾಡಲಾಗುವುದು. ಅಲ್ಪಸಂಖ್ಯಾತರ ಮಕ್ಕಳಿಗಾಗಿ ಕೆಪಿಎಸ್ ಶಾಲೆಯೂ ಮಂಜೂರಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
21ಕೆಆರ್ ಎಂಎನ್ 1,2.ಜೆಪಿಜಿ1.ರಾಮನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕರು ಇಕ್ಬಾಲ್ ಹುಸೇನ್ ಪಾಲ್ಗೊಂಡಿರುವುದು.
2.ರಾಮನಗರದ ಹಳೇ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿದರು.