)
ಉಡುಪಿ: ಅತ್ತ ಪಡುಗಡಲಿನಲ್ಲಿ ಸೂರ್ಯ ಅಸ್ತಂಗತನಾಗುತ್ತಿದ್ದಾಗ, ಇತ್ತ ಭಕ್ತಿಯ ಕಡಲಿನಲ್ಲಿ ಮಿಂದೇಳುತ್ತಿದ್ದ ಕೃಷ್ಣನಗರಿಯಲ್ಲಿ 253ನೇ ದ್ವೈವಾರ್ಷಿಕ ಪರ್ಯಾಯೋತ್ಸವದ ಪ್ರಕ್ರಿಯೆಗಳು ಆರಂಭವಾಯಿತು.
ಕೃಷ್ಣಮಠ ಹೊಸ ಸುಣ್ಣ ಬಣ್ಣಗಳಿಂದ ಮದುವಣಗಿತ್ತಿಯಂತೆ ಶೃಂಗಾರವಾಗಿದ್ದರೆ, ಪರ್ಯಾಯ ಶಿರೂರು ಮಠಕ್ಕಂತೂ ವೈಭವಪೂರ್ಣವಾಗಿ ವಿದ್ಯುತ್ ದೀಪಗಳ ಅಲಂಕಾರದಿಂದ ಕಣ್ಣು ಕೂರೈಸುತ್ತಿತ್ತು. ರಥಬೀದಿಯಲ್ಲಿ ಬೆಳಕು ಹಾಲಿನಂತೆ ಚೆಲ್ಲಿತ್ತು. ಸಂಪ್ರದಾಯದಂತೆ ಪರ್ಯಾಯ ಪೀಠಾರೋಹಣಕ್ಕೆ ಮೊದಲು ಮುಂಜಾವ 1.30ಕ್ಕೆ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕಾಪುವಿನ ದಂಡತೀರ್ಥ ಪುಷ್ಕರಣಿಗೆ ತೆರಳಿ, ಪುಣ್ಯಸ್ನಾನ ಮಾಡಿ, ಮರಳಿ ಇಲ್ಲಿನ ಜೋಡುಕಟ್ಟೆಗೆ ಬಂದಾಗ ಅವರನ್ನು ಸ್ವಾಗತಿಸಲು ಇತರ ಏಳು ಮಠಾಧೀಶರು ಹೊಸಮಡಿ ಬಟ್ಟೆಗಳನ್ನುಟ್ಟು, ತಲೆಗೆ ಕಾಷಾಯ ವಸ್ತ್ರದ ಮುಂಡಾಸು ಧರಿಸಿ ತಂತಮ್ಮ ಮಠದ ಶಿಷ್ಯವರ್ಗ, ಬಿರುದಾವಳಿ, ಮೇನೆಗಳೊಂದಿಗೆ ಸಿದ್ದರಾಗಿದ್ದರು.
ಈ ಬಾರಿ ವಿಶೇಷವಾಗಿ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ 85ಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು, ಸ್ಥಬ್ಧಚಿತ್ರಗಳು ನಾಡಹಬ್ಬ ಪರ್ಯಾಯೋತ್ಸವ ಮೆರವಣಿಗೆಗೆ ಹೊಸ ಸಾಂಸ್ಕೃತಿಕ ಕಳೆಯನ್ನು ನೀಡಿದ್ದವು. ಜೋಡುಕಟ್ಟೆಯಿಂದ ಕೋರ್ಟು ರಸ್ತೆ, ಡಯಾನ ವೃತ್ತ, ಕೊಳದಪೇಟೆ, ತೆಂಕುಪೇಟೆಯಿಂದ ರಥಬೀದಿವರೆಗೆ ಇಕ್ಕೆಲಗಳಲ್ಲಿ ಸಂಜೆಯಿಂದಲೇ ಕಾಯುತ್ತಿದ್ದ ಲಕ್ಷಾಂತರ ಮಹಿಳೆಯರು, ಮಕ್ಕಳು ಹಿರಿಯರು ಭಕ್ತಿ ಮತ್ತು ಸಡಗರದಿಂದ ಅಷ್ಟ ಮಠಾಧೀಶರ ಪಲ್ಲಕ್ಕಿ ಮೆರವಣಿಗೆ ನೋಡಲು ಜಾತಕ ಪಕ್ಷಯಂತೆ ಕಾಯುತಿದ್ದರು.ಸಂಜೆಯಿಂದ ಮಧ್ಯರಾತ್ರಿಯವರೆಗೆ ಮೆರವಣಿಗೆಯನ್ನು ನೋಡಲೆಂದೇ ಕಾಯುತಿದ್ದ ಜನರ ಮನೋರಂಜನೆಗಾಗಿ ಹತ್ತಾರು ಕಡೆಗಳಲ್ಲಿ ವೇದಿಕೆಗಳಲ್ಲಿ ಸಂಗೀತ-ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶಿರೂರು ಶ್ರೀಗಳು ಮತ್ತು ಇತರ ಮಠಾಧೀಶರು ಸುಮಾರು 3 ಗಂಟೆಗೂ ಅಧಿಕ ಮೆರವಣಿಗೆಯಲ್ಲಿ ಮುಂಜಾನೆ ಸುಮಾರು 5.15ಕ್ಕೆ ರಥಬೀದಿ ಪ್ರವೇಶಿಸಿ, ಕನಕನ ಕಿಂಡಿಯಲ್ಲಿ ಕೃಷ್ಣದರ್ಶನ ಮಾಡಿ, 5.45ಕ್ಕೆ ಪರ್ಯಾಯ ಪೀಠದಲ್ಲಿ ಕುಳಿತು, ಪುತ್ತಿಗೆ ಶ್ರೀಗಳಿಂದ ಕೃಷ್ಣಮಠದ ಕೀಲಿ ಕೈ ಮತ್ತು ಅಕ್ಷಯ ಪಾತ್ರೆಗಳನ್ನು ಸ್ವೀಕರಿಸುತ್ತಾರೆ. 5.55ಕ್ಕೆ ಬಡಗುಮಾಳಿಗೆಯಲ್ಲಿ ಸಾಂಪ್ರದಾಯಿಕ ದರ್ಬಾರ್, 6.15ಕ್ಕೆ ರಾಜಾಂಗಣದಲ್ಲಿ ಬಹಿರಂಗ ದರ್ಬಾರ್, ಆಶೀರ್ವಚನ, ಯೋಜನೆಗಳ ಘೋಷಣೆ, ಕೃಷ್ಣಮಠದ ನೂತನ ಅಧಿಕಾರಿ ವರ್ಗದ ಪ್ರಕಟಣೆ ನಡೆಸುತ್ತಾರೆ, ಬಳಿಕ 10.30ಕ್ಕೆ ಶ್ರೀ ಕೃಷ್ಣದೇವರಿಗೆ ಶ್ರೀ ವೇದವರ್ಧನ ತೀರ್ಥರು ತಮ್ಮ ಜೀವನ ಮೊದಲ ಮಹಾಪೂಜೆ ನೆರವೇರಿಸಿ, ಮುಂದಿನ 2 ವರ್ಷಗಳ ಶ್ರೀಕೃಷ್ಣಾ ಪೂಜಾ ಕೈಂಕರ್ಯವನ್ನು ಆರಂಭಿಸುತ್ತಿದ್ದಾರೆ.
ಇದು 253ನೇ ಪರ್ಯಾಯೋತ್ಸವ: ಸುಮಾರು 12ನೇ ಶತಮಾನದಲ್ಲಿ ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿದ ಮಧ್ವಾಚಾರ್ಯರ ನಂತರ ಸಾವಿರಾರು ಪರ್ಯಾಯೋತ್ಸವಗಳಾಗಿವೆ. ಆರಂಭದಲ್ಲಿ 2 ತಿಂಗಳಿಗೊಮ್ಮೆ ಪರ್ಯಾಯಗಳು ನಡೆಯುತಿದ್ದವು, 16ನೇ ಶತಮಾನದಲ್ಲಿ ಶ್ರೀ ವಾದಿರಾಜ ತೀರ್ಥರು 2 ವರ್ಷಗಳಿಗೊಮ್ಮೆ ಪರ್ಯಾಯವನ್ನು ಆರಂಭಿಸಿದ ಮೇಲೆ ಅವುಗಳ ಲೆಕ್ಕ ಮಾಡಿದರೆ ಅಷ್ಟ ಮಠಗಳ ನಡುವೆ ಪರ್ಯಾಯೋತ್ಸವಗಳ 31 ಸುತ್ತುಗಳು ಪೂರ್ಣಗೊಂಡು, 5ನೇ ಪರ್ಯಾಯೋತ್ಸವ ನಡೆಯುತ್ತಿದೆ. ಅಂದರೇ ಇಂದು ಆರಂಭವಾಗಿರುವ ಶಿರೂರು ಮಠದ ಪರ್ಯಾಯವು 253ನೇಯದ್ದಾಗಿದೆ.