ಬೆಂಕಿಯನ್ನು ಅಪ್ಪಿದ ವಿಸ್ಮಯಕ್ಕೆ ಸಾಕ್ಷಿಯಾದರೂ ಸಹಸ್ರಾರು ಭಕ್ತರು
ಕೆಂಡದ ರಾಶಿಗೆ ಕೈ ಹಾಕಿ ಬೆಂಕಿ ತೂರಿದ ಭಕ್ತರುಕನ್ನಡಪ್ರಭ ವಾರ್ತೆ ಕೂಡ್ಲಿಗಿಇತ್ತ ಸೂರ್ಯ ತೆರೆಮರೆಗೆ ಸರಿಯುತ್ತಿದ್ದಂತೆ ಕುಗ್ರಾಮವೊಂದರಲ್ಲಿ ಸೂರ್ಯನ ಕಾಂತಿಯ ಮೀರಿಸುವಂತೆ ಬೆಂಕಿಯ ರಾಶಿ ಉರಿಯತೊಡಗಿತ್ತು, ನೆರೆದಿದ್ದ ಎಲ್ಲರಿಗೂ ಅದೇ ಕುತೂಹಲ ಯಾವಾಗ ಭಕ್ತರು ಬೆಂಕಿಯ ರಾಶಿಗೆ ಜಿಗಿದು ಬೊಗಸೆಯಿಂದ ಬೆಂಕಿಯ ಕೆಂಡ ತೂರತ್ತಾರೆ ಎನ್ನುವುದು... ಜನತೆ ಚಾತಕಪಕ್ಷಿಯಂತೆ 2 ತಾಸಿನವರೆಗೂ ಕಾದು ಕುಳಿತಿದ್ದರು. ಗಂಗೆಪೂಜೆಗೆ ಹೋಗಿ ಬಂದ ಬಗ್ಗಲು ಓಬಳೇಶ್ವರ ಸ್ವಾಮಿಯ 25ಕ್ಕೂ ಹೆಚ್ಚು ಭಕ್ತರು ಬರೀ ಮೈಯಲ್ಲಿ ಉರುಮೆಯ ನಾದಕ್ಕೆ ಮೈಮರೆತು ಬೆಂಕಿಯ ರಾಶಿ ಕಂಡೊಡನೆ ಬೆಂಕಿಯ ರಾಶಿಗೆ ನಾ ಮೇಲು ತಾ ಮೇಲು ಎಂದು ಜಿಗಿದೇ ಬಿಟ್ಟರು. ನಿಗಿ ನಿಗಿ ಕೆಂಡಗಳನ್ನು ಬೊಗಸೆಯಲ್ಲಿ ಹಿಡಿದು ಹೂವಿನಂತೆ ಎತ್ತಿ ಭಕ್ತರ ಕಡೆ ತೂರಿಯೇ ಬಿಟ್ಟರು. ಇತ್ತ ನೆರೆದಿದ್ದ ಸಹಸ್ರಾರು ಜನತೆಯ ಮೇಲೆ ಬೆಂಕಿ ಕೆಂಡಗಳು ಬಿದ್ದರೂ ಬೆಂಕಿ ಇಲ್ಲಿ ಸುಡುವ ಬದಲು ಹೂಮಳೆ ಸುರಿದ ಬಾಸವಾಯಿತು.
ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಕೂಡ್ಲಿಗಿ ತಾಲೂಕಿನ ಬೇಡಬುಡಕಟ್ಟು ಜನರು ವಾಸಿಸುವ ಪುಟ್ಟಹಳ್ಳಿ ಹೊಸಹಟ್ಟಿ. 3 ವರ್ಷಕ್ಕೊಮ್ಮೆ ನಡೆಯುವ ಶ್ರೀ ಬಗ್ಗಲು ಓಬಳೇಶ್ವರ ಸ್ವಾಮಿಯ ಗುಗ್ಗರಿ ಹಬ್ಬದಲ್ಲಿ ತಮ್ಮ ಪೂರ್ವಜರಿಂದಲೂ ಬೆಂಕಿಯನ್ನು ತೂರುವ ಆಚರಣೆ ಮುಂದುವರೆದಿದೆ. ಆಧುನಿಕತೆಯ ಯುಗದಲ್ಲಿಯೂ ಬೆಂಕಿಯ ರಾಶಿಯಲ್ಲಿಯೇ 25 ನಿಮಿಷಕ್ಕೂ ಹೆಚ್ಚು ಕಾಲ ಮೈ ಮರೆತು ಕೆಂಡಗಳನ್ನೇ ಬೊಗಸೆಯಲ್ಲಿ ತೂರುವುದೆಂದರೆ ಹುಡುಕಾಟನಾ.? ಕೆಂಡಗಳನ್ನು ತೂರುವ ಮುಂಚೆಯೇ ಬೇಡಬುಡಕಟ್ಟು ಜನಾಂಗದ ಮುಖಂಡನೊಬ್ಬ ಗುಡಿಯಲ್ಲಿಯೇ ಕುಳಿತು ಆದೇಶ ಮಾಡಿದ. ತಕ್ಷಣವೇ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಲೈಟ್ ಆರಿಸಿದರು. ಭಕ್ತರು ತಂದಿದ್ದ ತಮ್ಮ ಮೊಬೈಲ್ ಬಂದ್ ಮಾಡಿದರು. ಇಡೀ ಗ್ರಾಮವೇ ಕಗ್ಗತ್ತಲಾಯಿತು. ಆಗ ಶುರುವಾಗಿಯಿತು ನೋಡಿ ಬೆಂಕಿ ಓಕುಳಿಯ ರೌದ್ರ ತಾಂಡವಕ್ಕೆ ಮುನ್ನುಡಿ..!ಶ್ರೀ ಬಗ್ಗಲು ಓಬಳೇಶ್ವರ ಸ್ವಾಮಿಯ ಪೂಜಾರಿ ಕೆಂಡದ ರಾಶಿಗೆ ಬಂದು ಬೊಗಸೆ ತುಂಬಾ ಬರೀ ಗೈಯಲ್ಲಿ ಕೆಂಡವನ್ನು ತೆಗೆದು ಮಣ್ಣಿನ ಮಡಿಕೆಯಲ್ಲಿ ತುಂಬಿಕೊಂಡು ಹೋಗಿ ದೇವರ ಮುಂದೆ ಕುಳಿತುಬಿಟ್ಟ. ಇತ್ತ ಗಂಗೆಯಿಂದ ಬಂದ ಭಕ್ತರು ನೋಡು ನೋಡುತ್ತಿದ್ದಂತೆಯೇ ಇತ್ತ ಕೆಂಡದ ರಾಶಿಯಲ್ಲಿ ಒಬ್ಬರ ಮೇಲೊಬ್ಬರಂತೆ ಭಕ್ತರು ಬೆಂಕಿಯ ಸ್ನಾನ ಮಾಡಿದರು. ಆ ಭಕ್ತರ ಮೈತುಂಬಾ ಬೆಂಕಿಯ ರಾಶಿಯೇ. ಇದೇನು ವಿಸ್ಮಯ ಎಂದರು ನೆರೆದಿದ್ದ ಜನತೆ. 25 ನಿಮಿಷಗಳ ಕಾಲ ಬೆಂಕಿಯೋಕುಳಿ ಆಡಿದರು. ಬೊಗಸೆಯಿಂದ ತೂರುವ ಕೆಂಡಗಳು ನೆರೆದಿದ್ದ ಸಾವಿರಾರು ಭಕ್ತರ ಮೇಲೆ ಹೂಮಳೆಯಂತೆ ಬಿದ್ದವು.
ನಿಗಿ ನಿಗಿ ಕೆಂಡಗಳು ಇದ್ದಿಲುಗಳಾಗುವವರೆಗೂ ತೂರಿದ ಭಕ್ತರು ನಂತರ ಇದ್ದಿಲುಗಳನ್ನೇ ರಾಶಿ ಮಾಡಿ ಆ ರಾಶಿಗೆ ಶ್ರದ್ಧಾಭಕ್ತಿಯಿಂದ ಕೈ ಮುಗಿದರು. ಇದೇ ಸಂದರ್ಭ ಗ್ರಾಮದ 85 ಹರೆಯದ ಓಬಜ್ಜಿ, ಅಂಗಡಿ ಓಬಕ್ಕ ಬಣ್ಣಕ್ಕೆ ಬಾಗುತಾ... ಓಬಯ್ಯ ಬಂಗಾರ ತೂಗುತಾನೆ... ಎಂದು ಬಗ್ಗಲು ಓಬಳೇಶ್ವರ ಬಗ್ಗೆ ತಮ್ಮ ಪೂರ್ವಜರಿಂದ ಬಂದ ಜಾನಪದ ಹಾಡುಗಳನ್ನು ಹೇಳಿದರು.