ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಧರ್ಮಸ್ಥಳ ಭಕ್ತಾದಿಗಳ ವೇದಿಕೆ ವತಿಯಿಂದ ಮಂಗಳವಾರ ತೀರ್ಥಹಳ್ಳಿ ಪಟ್ಟಣದ ತಾಲೂಕು ಕಚೇರಿ ಎದುರು ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಎಡಪಂಥೀಯರ ಕಾರಸ್ತಾನದಿಂದ ಧರ್ಮಸ್ಥಳ ಕ್ಷೇತ್ರದ ಘನತೆಗೆ ಧಕ್ಕೆ ತರುವ ಮೂಲಕ ಸನಾತನ ಧರ್ಮ ಮತ್ತು ಹಿಂದೂ ಧಾರ್ಮಿಕ ಭಾವನೆಗಳ ನಾಶಕ್ಕೆ ಬುದ್ದಿಜೀವಿಗಳೆನಿಸಿಕೊಂಡ ನಕ್ಸಲ್ ಬೆಂಬಲಿಗರಿಂದ ಷಡ್ಯಂತ್ರ ನಡೆಯುತ್ತಿದ್ದು ಈ ಬಗ್ಗೆ ಹಿಂದೂಗಳು ಜಾಗೃತರಾಗುವ ಅನಿವಾರ್ಯತೆ ಇದೆ ಎಂದರು.
ಧರ್ಮಸ್ಥಳ ಕ್ಷೇತ್ರದ ಮೇಲಿರುವ ಧಾರ್ಮಿಕ ಭಾವನೆಯನ್ನು ಜನರ ಮನಸ್ಸಿನಿಂದ ಯಾರಿಂದಲೂ ಅಳಿಸಲಾಗದು. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸರ್ಕಾರ ಮಾಡಲಾಗದ ಕೆಲಸವನ್ನು ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಕ್ಷೇತ್ರದಿಂದ ನಡೆಸಲಾಗುತ್ತಿದ್ದು ಮದ್ಯವರ್ಜನ ಶಿಬಿರ ಮುಂತಾದ ಕಾರ್ಯಗಳ ಮೂಲಕ ಸಾವಿರಾರು ಕುಟುಂಬಗಳಿಗೆ ಬದುಕು ನೀಡಲಾಗಿದೆ ಎಂದರು.ತಲೆ ಬುರುಡೆಯನ್ನು ತಂದ ಮುಸುಕುಧಾರಿಯ ಕೃತ್ಯವನ್ನು ಪರಿಶೀಲಿಸದೆ ಸಿನಿಮಾ ರೀತಿಯ ಕಥೆ ಹೆಣೆದು ಷಡ್ಯಂತ್ರವನ್ನು ಹೂಡುವ ಮೂಲಕ ಧರ್ಮಸ್ಥಳದ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ. ಮುಸುಕುಧಾರಿಯ ವಿರುದ್ದ ಪೋಲಿಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಎಸ್‍ಐಟಿ ರಚನೆ ಮಾಡುವ ಮೂಲಕ ಸರ್ಕಾರ ಕೂಡ ಈ ವಿಚಾರದಲ್ಲಿ ವಿಚಲಿತವಾಗಿದೆ ಎಂದರು
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ವಿರುದ್ದದ ಕಾರ್ಯಾಚರಣೆ ಬಹಳ ಕಾಲದಿಂದ ನಡೆಯುತ್ತಿದ್ದು ಇದರ ವಿರುದ್ದ ಹಾಗೂ ಧರ್ಮ ರಕ್ಷಣೆಯ ಪರವಾದ ಹೋರಾಟ ಅನಿವಾರ್ಯವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರೂ ಇದನ್ನು ಪ್ರತಿಪಾದಿಸಿದ್ದಾರೆ. ಷಡ್ಯಂತ್ರ ನಡೆಸಿದವರ ವಿರುದ್ದ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಧಾರ್ಮಿಕ ಮುಖಂಡ ಡಾ.ಜೀವಂಧರ ಜೈನ್, ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಪ್ರತಿಭಟನೆಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಚಂದವಳ್ಳಿ ಸೋಮಶೇಕರ್ ಇದ್ದರು.