ಸಿದ್ದಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 7ನೇ ಪುಣ್ಯ ಸ್ಮರಣೆಯನ್ನು ಸಿದ್ದಗಂಗೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ, ತುಮಕೂರು
ಸಿದ್ದಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 7ನೇ ಪುಣ್ಯ ಸ್ಮರಣೆಯನ್ನು ಸಿದ್ದಗಂಗೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು. ಶ್ರೀಕ್ಷೇತ್ರದಲ್ಲಿ ನಡೆದ ಕಾಯಕ ಯೋಗಿಯ 7ನೇ ಪುಣ್ಯ ಸಂಸ್ಮರಣೋತ್ಸವದಲ್ಲಿ ಪಾಲ್ಗೊಳ್ಳಲು ಸಿದ್ದಗಂಗಾ ಮಠಕ್ಕೆ ಆಗಮಿಸಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ವಿ. ಸೋಮಣ್ಣ, ಚಿಕ್ಕಬಳ್ಳಾಪುರದ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೆರಿಯನ್ ಮಿಷನ್ ಶ್ರೀ ಸತ್ಯಸಾಯಿ ಲೋಕ ಸೇವಾಗುರುಕುಲಂ ಸಂಸ್ಥಾಪಕರಾದ ಶ್ರಿ ಮಧುಸೂದನ ಸಾಯಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸಂಸದರಾದ ಗೋವಿಂದ ಎಂ.ಕಾರಜೋಳ, ಡಾ. ಸಿ.ಎನ್.ಮಂಜುನಾಥ್, ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಶ್ರೀಗಳ 7ನೇ ಪುಣ್ಯ ಸಂಸ್ಮರಣೋತ್ಸವಕ್ಕೆ ದೇಶದ ಉಪರಾಷ್ಟ್ರಪತಿಗಳ ಜತೆಗೆ ವಿವಿಧ ಮಠಾಧೀಶರುಗಳು, ಹರಗುರುಚರಮೂರ್ತಿಗಳು ಹಾಗೂ ಸಹಸ್ರಾರು ಭಕ್ತ ಸಮೂಹ ಸಾಕ್ಷಿಯಾದರು. ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ನಸುಕಿನಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವೇದ ಘೋಷಗಳು ಮೊಳಗಿದವು. ಶ್ರೀಗಳ 7ನೇ ಪುಣ್ಯಾರಾಧನೆ ಪ್ರಯುಕ್ತ ಶ್ರೀಗಳು ಐಕ್ಯರಾಗಿರುವ ಶಿವಯೋಗಿ ಮಂದಿರ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿತ್ತು.ಶ್ರೀಗಳ ಗದ್ದುಗೆಯನ್ನು ವಿವಿಧ ಪುಷ್ಪ, ಬಗೆ ಬಗೆಯ ಹಣ್ಣು ಹಂಪಲುಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದು, ವಿದ್ಯುತ್ ದೀಪಾಲಂಕಾರದೊಂದಿಗೆ ಸಿದ್ದಗಂಗಾ ಮಠ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಮುಂಜಾನೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯಲ್ಲಿ ಪೂಜಾ ವಿಧಾನಗಳಾದ ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚ ನೆಯೊಂದಿಗೆ ನೆರವೇರಿದವು. ಹಲವು ಮಠಾಧೀಶರುಗಳು, ಹರಗುರುಚರಮೂರ್ತಿಗಳು ಪಾಲ್ಗೊಂಡು ಭಕ್ತಿ ಸರ್ಪಿುಸಿದರು.
ಶ್ರೀಗಳ ಮೂರ್ತಿ ಮೆರವಣಿಗೆ.....ಶ್ರೀಮಠದ ಆವರಣದಲ್ಲಿ ಸುಮಂಗಲಿಯರು ಹೊತ್ತ 108 ಕಳಸಗಳೊಂದಿಗೆ ರುದ್ರಾಕ್ಷಿ ಮಂಟಪದಲ್ಲಿ ಲಿಂಗೈಕ್ಯ ಶ್ರೀಗಳ ಮೂರ್ತಿಯ ಮೆರವಣಿಗೆ ವೈಭವಯುತವಾಗಿ ನಡೆಯಿತು. ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ವಿಗ್ರಹ ಮೆರವಣಿಗೆಯು ಶ್ರೀಗಳ ಗದ್ದುಗೆ ಮಂದಿರದಿಂದ ಆರಂಭವಾಗಿ ಕ್ಯಾತ್ಸಂದ್ರದ ವರೆಗೆ ನಡೆಯಿತು. ಈ ಮೆರವಣಿಗೆಯುದ್ದಕ್ಕೂ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಹರಗುರುಚರಮೂರ್ತಿಗಳು, ಭಕ್ತಾದಿಗಳು, ಶಾಲಾ ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಶ್ರೀಗಳ ಭಾವಚಿತ್ರ ಮೆರವಣಿಗೆಯಲ್ಲಿ ಕರಡಿ ಮಜಲು, ನಂದಿಧ್ವಜ ಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಹಾಗೂ ವಾದ್ಯ ಮೇಳಗಳ ಪ್ರದರ್ಶನ ಆಕರ್ಷಕವಾಗಿತ್ತು.6 ಕಡೆ ದಾಸೋಹಶ್ರೀಗಳ 7ನೇ ಪುಣ್ಯ ಸಂಸ್ಮರಣೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದ 6 ಕಡೆಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗಾಗಿ ಬಗೆ ಬಗೆಯ ಖಾದ್ಯಗಳೊಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಉಪಹಾರ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಚಿತ್ರಾನ್ನ, ಪಾಯಸ, ಖಾರಬೂಂದಿ, ಅನ್ನಸಾಂಬರು, ಮಾದ್ಲಿ, ಮೈಸೂರು ಪಾಕ್ ಸೇರಿದಂತೆ ವಿವಿಧ ಖಾದ್ಯಗಳನ್ನು ಭಕ್ತರು ಸವಿದು ಪುನೀತರಾದರು. ಉಪರಾಷ್ಟ್ರಪತಿ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.