ಹನೂರು ಮಲೆಮಹದೇಶ್ವರ ಬೆಟ್ಟಕ್ಕೆ ತೆರುಳುವ ಮಾರ್ಗ ಮಧ್ಯದಲ್ಲಿ ಕಾಡಾನೆ ಕಂಡು ಬೆಚ್ಚಿ ಓಡಿ ಹೋಗುತ್ತಿರುವ ಮಾದಪ್ಪನ ಭಕ್ತಾದಿಗಳು.
ಕನ್ನಡಪ್ರಭ ವಾರ್ತೆ ಹನೂರು
ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರಿಗೆ ಮಾರ್ಗಮಧ್ಯೆ ಕಾಡಾನೆಯೊಂದು ರಸ್ತೆಗೆ ಅಡ್ಡಲಾಗಿ ಬಂದಿದ್ದಕ್ಕೆ ಭಕ್ತರು ಭಯಭೀತರಾದ ಘಟನೆ ನಡೆದಿದೆ.ತಾಲೂಕಿನ ಕೋಣನಕೆರೆ-ತಾಳುಬೆಟ್ಟ ರಸ್ತೆಯಲ್ಲಿ ದಿಢೀರನೇ ಕಾಡಾನೆಯೊಂದು ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದು ಈ ವೇಳೆ ಮಲೆಮಹದೇಶ್ವರಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗಗಳಲ್ಲಿ ಹೆಚ್ಚು ಗಸ್ತು ನಡೆಸಿ ಕಾಡಿನಿಂದ ನಾಡಿಗೆ ಕಾಡಾನೆಗಳು ಬರದಂತೆ ಕ್ರಮ ಜರುಗಿಸಬೇಕೆಂದು ಮಾದಪ್ಪನ ಭಕ್ತರು ಒತ್ತಾಯಿಸಿದ್ದಾರೆ.
ಕಾಲ್ನಡಿಗೆ ಭಕ್ತರು ಎಚ್ಚರಿದಿಂದ ಸಂಚರಿಸಲಿ:
ಹನೂರು ಪಟ್ಟಣದ ಹೊರವಲಯದಲ್ಲಿನ ಎಲ್ಲೆಮಾಳ ರಸ್ತೆ, ಕೋಣನಕೆರೆ ಸಮೀಪ ಹಾಗೂ ತಾಳುಬೆಟ್ಟ ಮತ್ತು ಮಹದೇಶ್ವರಬೆಟ್ಟ ನಡುವಿನ ಭಾಗದಲ್ಲಿ ಈ ಹಿಂದೆ ಹಲವು ಭಾರಿ ಕಾಡಾನೆಗಳು ಕಾಣಿಸಿಕೊಂಡು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದವು. ಈ ನಿಟ್ಟಿನಲ್ಲಿ ಕಾಲ್ನಡಿಗೆಯ ಭಕ್ತರು ಮತ್ತು ಸ್ಥಳೀಯರು ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ.
ಕೆಲ ದಿನಗಳಲ್ಲಿ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಜರುಗುರಲಿದೆ, ಈ ವೇಳೆ ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಮಾದಪ್ಪನ ಭಕ್ತರು ಕಾವೇರಿ ನದಿ ದಾಟಿ ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಸಮಯದಲ್ಲಿ, ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಬಹುದು. ಆದ ಕಾರಣ, ಭಕ್ತರು ಮತ್ತು ಪ್ರವಾಸಿಗರು ರಾತ್ರಿಯ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತೆರಳದಂತೆ, ಹಾಗೂ ಎಚ್ಚರಿಕೆಯಿಂದ ಸಾಗಲು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.