ಬರದ ನಾಡಿನಿಂದ ಹರಿದು ಬಂದ ಭಕ್ತಿ: ತರಳಬಾಳು ಶ್ರೀ ಶ್ಲಾಘನೆ

KannadaprabhaNewsNetwork |  
Published : Apr 05, 2026, 01:30 AM IST
ತರಳಬಾಳು ಮಠದ ಜಾನುವಾರುಗಳಿಗೆ ರಾಗಿ ಹುಲ್ಲು ಹೊತ್ತು ತಂದಿರುವ ಟ್ರಾಕ್ಟರ್‌ ಸಾಲುಗಳು.ರಾಶಿ ಪೂಜೆ ನೆರವೇರಿಸಿದ ತರಳಬಾಳು ಶಿವಮೂರ್ತಿ ಶ್ರೀಗಳು | Kannada Prabha

ಸಾರಾಂಶ

ತರಳಬಾಳು ಮಠದ ಜಾನುವಾರುಗಳಿಗೆ ರಾಗಿ ಹುಲ್ಲು ಹೊತ್ತು ತಂದಿರುವ ಟ್ರಾಕ್ಟರ್‌ ಸಾಲುಗಳು.-----ರಾಶಿ ಪೂಜೆ ನೆರವೇರಿಸಿದ ತರಳಬಾಳು ಶಿವಮೂರ್ತಿ ಶ್ರೀಗಳು

ಕನ್ನಡಪ್ರಭ ವಾರ್ತೆ ಸಿರಿಗೆರೆ

ಭಕ್ತಿ ತೂಕಕ್ಕೆ ಅಥವಾ ಅಳತೆಗೆ ಸಿಗುವ ಸಾಮಗ್ರಿಯಲ್ಲ. ಭಕ್ತಿ ಭಕ್ತಿಯೇ. ಅದಕ್ಕೆ ಸರಿಸಮಾನವಾದ ಅರ್ಥಗಳಿಲ್ಲ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದರು.

ತರಳಬಾಳು ಬೃಹನ್ಮಠದ ದಾಸೋಹಕ್ಕೆ ಶನಿವಾರ ಜಗಳೂರು, ಹರಪನಹಳ್ಳಿ, ಕೊಟ್ಟೂರು, ದಾವಣಗೆರೆ ಮತ್ತು ಹೊಳಲ್ಕೆರೆ ತಾಲ್ಲೂಕಿನ ಭಕ್ತರು ಸ್ವಯಂಪ್ರೇರಿತವಾಗಿ ೬೮೮ ಕ್ವಿಂಟಾಲ್‌ ರಾಗಿ, ೧೩ ಕ್ವಿಂಟಾಲ್‌ ಜೋಳ, ೫೮ ಕ್ವಿಂಟಾಲ್‌ ಅಕ್ಕಿ, ೯೨೨ ಪೆಂಡಿ ರಾಗಿ ಮೇವು ಮುಂತಾದ ಸಾಮಗ್ರಿಗಳನ್ನು ಸಂಗ್ರಹಿಸಿ ತಂದು ಶ್ರೀಗಳಿಗೆ ಸಮರ್ಪಿಸಿದ ಸಂದರ್ಭದಲ್ಲಿ ಏರ್ಪಸಿದ್ದ ಸಮಾರಂಭದಲ್ಲಿ ಶ್ರೀಗಳವರು ಆಶೀರ್ವಚನ ನೀಡಿದರು.

ಜಗಳೂರು, ಹರಪನಹಳ್ಳಿ, ಕೊಟ್ಟೂರು ತಾಲ್ಲೂಕು ಬರಪೀಡಿತ ತಾಲ್ಲೂಕುಗಳು. ಆದರೂ ಅಲ್ಲಿನ ಭಕ್ತರು ಮಠದ ಸೇವಾ ಕಾರ್ಯಕ್ಕೆ ಸಂಗ್ರಹಿಸಿ ತಂದಿರುವ ಧಾನ್ಯದ ಔದಾರ್ಯದಿಂದ ನಮ್ಮ ಮನಸ್ಸು ತುಂಬಿ ಬಂದಿದೆ ಎಂದರು.

ಭಕ್ತಿಯನ್ನು ತೂಕ ಮಾಡಬಾರದು. ಭಕ್ತರ ಕೊಡುಗೆ ಭಕ್ತಿಯೇ ಹೊರತು ಅದು ತೂಕಕ್ಕೆ ಸಿಗಬಾರದು. ಭಕ್ತಿಯನ್ನು ತೂಕ ಮಾಡಬಾರದು. ಅದಕ್ಕಾಗಿಯೇ ನಾವು ಈ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಾರದೇ ಏರ್ಪಸಿದ್ದ ತುಲಾಭಾರ ಬೇಡವೆಂದು ತಿಳಿಹೇಳಿದೆವು. ನಾವು ತಕ್ಕಡಿಯಲ್ಲಿ ಕುಳಿತುಕೊಂಡಿದ್ದರೆ ನಿಮ್ಮ ಭಕ್ತಿಯನ್ನು ಅಳತೆ ಮಾಡಿದಂತಾಗುತ್ತಿತ್ತು ಎಂದರು.

ತುಲಾಭಾರ ನಡೆಸುವ ಪದ್ಧತಿ ನಮ್ಮಲ್ಲಿ ಮೊದಲಿನಿಂದಲೂ ಇದೆ. ಆದರೂ ಆ ಬಗ್ಗೆ ನಮಗೆ ಸಹಮತ ಇಲ್ಲ. ಭಕ್ತರ ಭಕ್ತಿಯನ್ನು ಅಳತೆ ಮಾಡುವ ಕ್ರಮವು ನಮಗೆ ಒಪ್ಪಿಗೆಯಾಗಿಲ್ಲ ಎಂದರು. ಈಗ ಮಠಕ್ಕೆ ಭಕ್ತರು ಸಮರ್ಪಿಸಿದ ರೀತಿಯಲ್ಲಿಯೇ ಹೊನ್ನಾಳಿ, ಭದ್ರಾವತಿ, ಹರಿಹರ, ದಾವಣಗೆರೆ ಮುಂತಾದ ತಾಲ್ಲೂಕುಗಳ ಭಕ್ತರು ಅಕ್ಕಿಯನ್ನು ಸ್ವಯಂ ಪ್ರೇರಿತವಾಗಿ ಸಂಗ್ರಹಿಸಿ ಮಠಕ್ಕೆ ತಂದು ಸಮರ್ಪಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಶ್ರೀಗಳು ತಿಳಿಸಿದರು. ಜಗಳೂರು ಮತ್ತು ಭರಮಸಾಗರ ಏತ ನೀರಾವರಿ ಯೋಜನೆಯಿಂದ ಈ ವ್ಯಾಪ್ತಿಯ ರೈತರಿಗೆ ಅನುಕೂಲವಾಗಿದೆ. ಅಲ್ಲಲ್ಲಿ ಇರುವ ದೋಷಗಳನ್ನು ಅಧಿಕಾರಿಗಳು ಮತ್ತು ರೈತರ ಜೊತೆಗೆ ಚರ್ಚಿಸಿ ಸರಿಪಡಿಸಲು ಮುಂದಾಗುತ್ತೇವೆ ಎಂದು ಶ್ರೀಗಳು ರೈತರಿಗೆ ಭರವಸೆ ನೀಡಿದರು.

ರೈತರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯೂ ಒಂದು. ೧೬೦೦೦ ಕೋಟಿ ಯೋಜನೆ ೨೧೮೦೦ ಕೋಟಿ ಪರಿಷ್ಕೃತ ಯೋಜನೆ. ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಕೊಡಲಿಲ್ಲವೆಂದು ದೂರುತ್ತಾರೆ. ಇದು ರಾಜ್ಯ ಸರ್ಕಾರದ ಯೋಜನೆ. ರಾಜ್ಯ ಸರ್ಕಾರ ಈ ಯೋಜನೆಗೆ ಕೇಂದ್ರದ ನೆರವು ಕೇಳಿದೆ. ಆಗ ಇದ್ದ ರಾಷ್ಟ್ರೀಯ ಯೋಜನೆ ರದ್ದಾದ ಕಾರಣದಿಂದ ಕೇಂದ್ರದಿಂದ ನೆರವು ಬಂದಿಲ್ಲ. ಯೋಜನೆಗೆ ಮತ್ತೆ ಕೆಳಹಂತದಿಂದ ಪ್ರಸ್ತಾವನೆ ಸಲ್ಲಿಸುವ ಕೆಲಸ ಆಗಬೇಕಿತ್ತು. ಅದಕ್ಕೆ ಈಗ ಚಾಲನೆ ದೊರೆತಿದೆ ಎಂದು ಶ್ರೀಗಳು ತಿಳಿಸಿದರು.

*ಯುದ್ಧದಿಂದ ಜಗತ್ತಿನಲ್ಲಿ ಅಸ್ಥಿರತೆ: ತರಳಬಾಳು ಶ್ರೀ

ಸಿರಿಗೆರೆ: ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಜಗತ್ತಿನಲ್ಲಿ ಅಸ್ಥಿರತೆ ಮೂಡಿದೆ. ನಿತ್ಯ ಬಳಕೆಯ ಪೆಟ್ರೋಲ್‌, ಡೀಸೆಲ್‌, ಅಡಿಗೆ ಅನಿಲಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಯುದ್ಧದ ಪರಿಣಾಮ ಎರಡೂ ಕಡೆಯ ದೇಶಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಿವೆ. ಹಲವು ಪ್ರತಿಷ್ಠಿತ ಕಟ್ಟಡಗಳು ವಿದ್ವಂಸಕ್ಕೆ ಒಳಗಾಗಿವೆ. ಸೇತುವೆಗಳು ಕುಸಿದಿವೆ, ಜನರು ಸಾವಿಗೀಡಾಗಿದ್ದಾರೆ, ಹಲವು ನಾಯಕರನ್ನು ಕೊಲ್ಲಲಾಗಿದೆ. ಇದು ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಆದ್ದರಿಂದ ಆದಷ್ಟು ಬೇಗ ಈ ಯುದ್ದಕ್ಕೆ ತೆರೆ ಬಿದ್ದು, ಜಗತ್ತಿನಾದ್ಯಂತ ಮೂಡಿರುವ ಆತಂಕ ದೂರ ಆಗಬೇಕಾಗಿದೆ ಎಂಬುದು ತಮ್ಮ ಆಶಯವಾಗಿದೆ ಎಂದು ತರಳಬಾಳು ಶ್ರೀಗಳು ತಿಳಿಸಿದರು.

ಭದ್ರಾ ಮೇಲ್ಡಂಡೆ ಯೋಜನೆಗೆ ಗ್ಯಾರಂಟಿ ತ್ಯಾಗ ಮಾಡಿ:

ಭದ್ರಾ ಮೇಲ್ಡಂಡೆ ಮಧ್ಯ ಕರ್ನಾಟಕದ 12 ತಾಲೂಕುಗಳ ರೈತ ಸಮುದಾಯಕ್ಕೆ ನೆರವಾಗುವ ಬೃಹತ್‌ ಯೋಜನೆ. ಇದರ ಕಾಮಗಾರಿ ಪೂರ್ಣಗೊಂಡು ಯೋಜನೆ ಸುಲಲಿತವಾಗಿ ನಡೆದರೆ 75 ಲಕ್ಷ ರೈತ ಕುಟುಂಬಗಳು ನಿಟ್ಟುಸಿರು ಬಿಡಲಿವೆ. ೨.೭೫ ಲಕ್ಷ ಹೆಕ್ಟೇರ್‌ ಭೂಮಿಗೆ ಅನುಕೂಲವಾಗಲಿದೆ. ಈ ಯೋಜನೆ ಸಾಕಾರವಾಗಲು ೧೨ ತಾಲ್ಲೂಕುಗಳ ಗ್ಯಾರಂಟಿ ಫಲಾನುಭವಿಗಳು ತ್ಯಾಗ ಮಾಡಬೇಕಾಗಿದೆ. ಅಂತಹ ಔದಾರ್ಯವನ್ನು ಜನರು ತೋರಿಸಲಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುವರ್ಣನ್ಯೂಸ್‌ನ ಷಡಕ್ಷರಿಗೆ ಲಿಂಗಸುಗೂರು ಸಿದ್ರಾಮಪ್ಪ ಪ್ರಶಸ್ತಿ
ಸಮುದಾಯ ಆರೋಗ್ಯ ಕೇಂದ್ರಕ್ಕಿಲ್ಲ ಉದ್ಘಾಟನೆ ಭಾಗ್ಯ!