ಶಿವಮೊಗ್ಗ ವಿವಿಧೆಡೆ ಶ್ರದ್ಧಾಭಕ್ತಿಯ ರಾಮನವಮಿ ಆಚರಣೆ

KannadaprabhaNewsNetwork | Published : Apr 18, 2024 2:19 AM

ಸಾರಾಂಶ

ಶಿವಮೊಗ್ಗ ವಿವಿಧೆಡೆ ಆದರ್ಶ ಪುರುಷ ಶ್ರೀರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿನ ದೇವಸ್ಥಾನಗಳಲ್ಲಿ ವಿಶೇಷಪೂಜೆ ಸಲ್ಲಿಸಲಾಯಿತು. ಮಜ್ಜಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಭದ್ರಾವತಿ/ ಹೊಳೆಹೊನ್ನೂರು/ ಸೊರಬ

ಶಿವಮೊಗ್ಗದ ವಿವಿಧೆಡೆ ಬುಧವಾರ ಆದರ್ಶ ಪುರುಷ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿನ ದೇವಸ್ಥಾನಗಳಲ್ಲಿ ಬೆಳಗ್ಗೆಯೇ ಶ್ರೀರಾಮನನ್ನು ವಿವಿಧ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ರಾಮನವಮಿ ಅಂಗವಾಗಿ ಬೆಳಗ್ಗೆಯೇ ಶ್ರೀ ಕೋಟೆ ಸೀತಾರಾಮಾಂಜನೇಯ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಶ್ರೀರಾಮ ಕೃಪೆಗೆ ಪಾತ್ರರಾದರು. ಇದೇ ವೇಳೆ ದುರ್ಗಿಗುಡಿಯ ಸೀತರಾಮ ದೇವಸ್ಥಾನದ ದೇವರ ರಥೋತ್ಸವ ಜರುಗಿತು. ಗಾಂಧಿಬಜಾರ್‌ನ ತುಳಜಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ನಗರದಲ್ಲಿ ಬಿರುಬಿಸಿಲು ಇರುವ ಕಾರಣ ವಿವಿಢೆ ಶ್ರೀರಾಮನವಮಿಗೆ ಪಾನಕ, ಮಜ್ಜಿಗೆ, ಕೊಸಂಬರಿಯನ್ನು ಪ್ರಸಾದದ ರೂಪದಲ್ಲಿ ಹಳಚಲಾಯಿತು. ಆಟೋ ಸ್ಟ್ಯಾಂಡ್‌, ಬಸ್‌ ಸ್ಟ್ಯಾಂಡ್‌ ಮುಂಭಾಗ ಸೇರಿದಂತೆ ಹಲವಡೆ ಯುವಕರು ಪಾನಕ, ಕೊಸಂಬರಿ ಹಂಚಿದರು. ಹೊಳೆಹೊನ್ನೂರು ಶ್ರೀರಾಮ ಮಂದಿರದಲ್ಲಿ ರಾಮನವಮಿ

ಹೊಳೆಹೊನ್ನೂರು: ಪಟ್ಟಣದ ಪೇಟೆಬೀದಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಬುಧವಾರ ಶ್ರೀರಾಮ ನವಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.

ಶ್ರೀರಾಮ ನವಮಿ ಹಿನ್ನಲೆಯಲ್ಲಿ ಮುಂಜಾನೆ ಶ್ರೀರಾಮ ದೇವರಿಗೆ ಪುಣ್ಯತೀರ್ಥ ಮಜ್ಜನ, ಪಂಚಾಮೃತ ಅಭಿಷೇಕ, ವಿವಿಧ ಪುಷ್ಪಾಲಂಕಾರ, ಪ್ರಸಾದ ನೈವೇಧ್ಯ ನಂತರ ಮಹಾ ಮಂಗಳಾರತಿ ಮಾಡಲಾಯಿತು. ಈ ವೇಳೆ ವಿದ್ಯಾಂಸರಿಂದ ಶ್ರೀರಾಮ ಪ್ರವಚನ ನಡೆಯಿತು. ಭಾವಸಾರ ಕ್ಷತ್ರೀಯ ಹಾಗೂ ನಾಮದೇವ ಸಿಂಪಿ ಸಮಾಜದ ಮಹಿಳಾ ಮಂಡಳಿಯಿಂದ ಭಜನೆ, ಕೀರ್ತನ ಗೀತೆಗಳನ್ನು ಹಾಡಿದರು. ಶಾಲೆ ಮಕ್ಕಳಿಂದ ಹಾಡುಗಾರಿಕೆ ನಡೆಯಿತು. ಅರ್ಚಕ ಗಿರೀಶ್ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನ ನಡೆಸಿದರು. ಭಾವಸಾರ ಕ್ಷತ್ರಿಯ ಹಾಗೂ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಜಿ.ಎನ್.ಉದಯಕುಮಾರ್, ಉಪಾಧ್ಯಕ್ಷ ಶಾಂತಮ್ಮ, ಕಾರ್‍ಯದರ್ಶಿ ಎಂ.ಹರೀಶ, ಮುಖಂಡರಾದ ಡಿ.ಆರ್.ಸತ್ಯನಾರಾಯಣ, ಎಂ.ವೈ.ರಘುನಾಥ್, ಎಂ.ಪ್ರವೀಣ ರಾಕುಂಡೆ, ರಾಜು ಮೀರಜ್‌ಕರ್, ಕೆ.ಹನುಮಂತು, ಮಹಿಳಾ ಸದಸ್ಯರಾದ ಗಾಯತ್ರಿ, ಸುಕನ್ಯಾ, ತುಳಜಾ ಬಾಯಿ, ವಿಜಯಾ, ಶ್ವೇತಾ, ಪುಷ್ಪಾ ಹಾಗೂ ಸಮಾಜ ಬಾಂಧವ ಹಾಜರಿದ್ದರು.ಕಾಗದನಗರದಲ್ಲಿ ವಿಜೃಂಭಣೆಯ ರಾಮ ಮಹೋತ್ಸವ

ಭದ್ರಾವತಿ: ಕಾಗದನಗರದ ಶ್ರೀರಾಮ ದೇವಾಲಯದ ವತಿಯಿಂದ ರಾಮನವಮಿ ಅಂಗವಾಗಿ ಬುಧವಾರ ಶ್ರೀ ರಾಮ ಮಹೋತ್ಸವ ವಿಜೃಂಭಣೆಯಿಂದ ಜರುಗಿತು..

ಶ್ರೀ ರಾಮ ದೇವಾಲಯದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಅರ್ಚನೆ ಹಾಗು ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ನಡೆದವು. ಸಂಜೆ ದೇವಾಲಯದಿಂದ ರಾಜಬೀದಿ ಮೂಲಕ ಅರಳಿಕಟ್ಟೆವರೆಗೆ ಭಜನೆ, ನಾದಸ್ವರ ವಾದ್ಯಗಳೊಡನೆ ದೇವರ ರಥೋತ್ಸವ ಜರುಗಿತು. .

ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ರಥೋತ್ಸವದ ನಂತರ ಬುಳ್ಳಾಪುರದ ಶ್ರೀರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಶ್ರೀ ರಾಮ ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.ಚಿಕ್ಕಮಾಕೊಪ್ಪ ಗ್ರಾಮದಲ್ಲಿ ಶ್ರೀರಾಮನಿಗೆ ಪೂಜಾ ವಿಧಿ

ಸೊರಬ: ತಾಲೂಕಿನ ಚಿಕ್ಕಮಾಕೊಪ್ಪ ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ರಾಮ ನವಮಿ ಅಂಗವಾಗಿ ಶ್ರೀ ದೇವರಿಗೆ ಬುಧವಾರ ವಿಶೇಷವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.

ಬೆಳಗ್ಗೆಯಿಂದಲೇ ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ, ಕಲಶ ಸ್ಥಾಪನೆ, ಪವಮಾನ, ಪಂಚ ಸೂಕ್ತ ಹವನ, ಪೂರ್ಣಾಹುತಿ ಸೇರಿದಂತೆ ಮಹಮಂಗಳಾರತಿ ನೆರವೇರಿದವು.

ನಿರಂಜನ್ ಭಟ್‌ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನಡೆದವು, ವಿಶೇಷವಾಗಿ ದೇವಸ್ಥಾನಕ್ಕೆ ಪುಷ್ಪಗಳಿಂದ ಮತ್ತು ಕೇಸರಿ ಧ್ವಜಗಳಿಂದ ಹಾಗೂ ಮಾವಿನ ಎಲೆಗಳ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಮನವಮಿ ಅಂಗವಾಗಿ ಶ್ರೀರಾಮೇಶ್ವರ ಸೇವಾ ಸಮಿತಿ ವತಿಯಿಂದ ಬಂದಂತಹ ಭಕ್ತರಿಗೆ ಅನ್ನದಾಸೋಹ ಪ್ರಸಾದ ಸೇವೆ ಜೊತೆಗೆ ಪಾನಕ, ಕೋಸಂಬರಿ, ವಿತರಿಸಲಾಯಿತು.

ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ರಾಮೇಶ್ವರ ದೇವರ ದರ್ಶನ ಪಡೆದರು. ಸಂಜೆ ವೇಳೆ ಗ್ರಾಮದಲ್ಲಿ ಶ್ರೀರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಭ್ರಮದಿಂದ ಜರುಗಿತು, ಶ್ರೀ ರಾಮೇಶ್ವರ ಗೆಳೆಯರ ಬಳಗದವರು ರಾಮನವಮಿ ಅಂಗವಾಗಿ ಸುಮಾರು ೩೦ ಅಡಿ ಎತ್ತರದ ಶ್ರೀ ರಾಮನ ಭಾವಚಿತ್ರವನ್ನು ಅಳವಡಿಸಿದ್ದು ವಿಶೇಷವಾಗಿತ್ತು.ಆನಂದಪುರದಲ್ಲಿ ಸಡಗರದ ರಾಮನವಮಿ ಆಚರಣೆ

ಆನಂದಪುರ: ರಾಮನವಮಿಯ ಪ್ರಯುಕ್ತ ಬುಧವಾರ ಬಸವನಬೀದಿಯಾ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಶ್ರೀರಾಮ ಮಂದಿರ, ಕೋಟೆ ಆಂಜನೇಯ ಸ್ವಾಮಿ, ರಂಭಾಪುರಿ ಆಂಜನೇಯ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ ನೆರವೇ ರಿದ್ದು. ಆಗಮಿಸಿದಂತಹ ಭಕ್ತಾದಿಗಳಿಗೆ ಎಲ್ಲಾ ದೇವಾಲಯಗಳಲ್ಲಿ ಪಾನಕ , ಕೋಸಂಬರಿ, ರಸಾಯನ ವಿತರಿಸಲಾಯಿತು. ಅಲ್ಲದೆ ರಾಮನವಮಿಯ ಪ್ರಯುಕ್ತ ದೇವರಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.

Share this article