ಧಗ್ರಾ ಯೋಜನೆಯಿಂದ ಸ್ತ್ರೀಯರ ಸಬಲೀಕರಣಕ್ಕೆ ಮುನ್ನುಡಿ

KannadaprabhaNewsNetwork |  
Published : Jan 12, 2025 1:19 AM IST
ಹೂವಿನಹಡಗಲಿಯ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿಗೆ ಚಾಲನೆ ನೀಡಿದ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ.  | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ.

ಹೂವಿನಹಡಗಲಿ: ಇಲ್ಲಿನ ಯೋಜನಾ ಕಚೇರಿ ವ್ಯಾಪ್ತಿಯ ಅಕ್ಕಿಪೇಟೆಯ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ವಿಚಾರಗೋಷ್ಠಿ ಆಯೋಜಿಸಲಾಗಿತ್ತು.

ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳು, ಬೆಳೆದು ಬಂದ ದಾರಿ, ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಪ್ರತಿ ತಿಂಗಳು ಕೇಂದ್ರ ಸಭೆಯಲ್ಲಿ ಒಂದೊಂದು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಬಗೆ, ಜ್ಞಾನ ವಿಕಾಸ ಕೇಂದ್ರಗಳ ವಾರ್ಷಿಕೋತ್ಸವ, ನಿರ್ಗತಿಕರ ಮಾಶಾಸನ, ವಾತ್ಸಲ್ಯ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರಗಳು ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಸದಸ್ಯರು ಸದುಪಯೋಗ ಪಡೆದುಕೊಳ್ಳುತ್ತಿರುವುದನ್ನು ಪ್ರಶಂಸಿಸಿದರು.

ಪುರಸಭೆ ಸದಸ್ಯೆ ಲೀಲಾ ಆಟವಾಳಗಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ. ಮಹಿಳೆಯರಲ್ಲಿ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡಿ, ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟಿದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ. ರಾಮನಗೌಡ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಪ್ರತಿ ಹಳ್ಳಿ ಹಳ್ಳಿಯ ಜನರಿಗೆ ಮುಟ್ಟಿವೆ. ತಾಲೂಕಿನಲ್ಲಿ ಜನರಿಗೆ ಅದ್ಭುತವಾಗಿ ಸಹಾಯಕವಾಗಿದೆ, ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಗಳು ಸೇರಿ ಸಮಾಜದಲ್ಲಿರುವ ಅನಿಷ್ಠ ಪಿಡುಗುಗಳಾದ ಬಾಲ್ಯ ವಿವಾಹ, ಮಹಿಳೆಯರಿಗೆ ಸಂಬಂಧಿಸಿದ ಕೆಲವು ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಎಲ್ಲ ಸದಸ್ಯರು ಭಾಗಿಯಾಗೋಣ ಎಂದು ಕರೆ ನೀಡಿದರು.

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಶಿಕ್ಷಕಿ ಗೌರಮ್ಮ ಉಪನ್ಯಾಸ ನೀಡಿ ಮಹಿಳೆಯರು ಸುಸಂಸ್ಕೃತವಾಗಿ ಕುಟುಂಬವನ್ನು ನಿರ್ವಹಣೆ ಮಾಡಿದಾಗ, ಆ ಕುಟುಂಬ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತದೆ. ಯೋಜನೆಯ ಎಲ್ಲ ಕಾರ್ಯಕ್ರಮಗಳನ್ನು ಬಳಸಿಕೊಂಡು ಕುಟುಂಬವನ್ನು ಅದ್ಭುತವಾಗಿ ನಿರ್ವಹಣೆ ಮಾಡಲು ಸಾಧ್ಯವಿದೆ ಎಂದರು.

ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಸುಧಾ ಗಾವ್ಕರ್ ಮಾತನಾಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸಂತೋಷ ಜೈನ್, ಕೋಡಿಹಳ್ಳಿ ಕೊಟ್ರೇಶ್, ಯೋಜನಾಧಿಕಾರಿ ಸುಬ್ರಹ್ಮಣ್ಯ, ಒಕ್ಕೂಟದ ಅಧ್ಯಕ್ಷೆ ಗಂಗಮ್ಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಷ್ಮಾ, ಯೋಜನಾ ಕಚೇರಿ ವ್ಯಾಪ್ತಿಯ 25 ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.

PREV