ಕನ್ನಡಪ್ರಭ ವಾರ್ತೆ ರಾಮದುರ್ಗ
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕುತಂತ್ರದಿಂದ ಅಧಿಕಾರಕ್ಕೆ ಬಂದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಆಡಳಿತ ಮಂಡಳಿ ವಿರುದ್ಧ ಸೆಣಸಾಡಲು ಪಕ್ಕದ ತಾಲೂಕಿನ ಕೆಲ ಕಾಣದ ಕೈಗಳು ಸಹಾಯ ಮಾಡಲು ಮುಂದಾಗಿದ್ದು ಇದನ್ನು ಸದ್ಬಳಕೆ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಬೇಕೆಂದು ಎಂದು ಕಬ್ಬು ಬೆಳೆಗಾರರ ಪೆನೆಲ್‌ನ ಪಿ.ಎಫ್.ಪಾಟೀಲ ಹೇಳಿದರು.ಇಲ್ಲಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಹಾಲಿ ಆಡಳಿತ ಮಂಡಳಿ ಬಣದ ವಿರುದ್ಧದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದಲೂ ಒಂದೇ ಕುಟುಂಬದವರು ಕಾರ್ಖಾನೆಯ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ಕಬ್ಬು ಬೆಳೆಗಾರರು, ಷೇರುದಾರರು ಕಣ್ಣಿಗೆ ಕಾಣುವುದಿಲ್ಲ. ಅವರಿಗೆ ಪೈಪೋಟಿ ನೀಡಲು ಪಕ್ಕದ ಪರ್ಯಾಯ ಪೆನೆಲ್ ಪಕ್ಷಾತೀತ, ಜ್ಯಾತ್ಯಾತೀತವಾಗಿ ಅಸ್ತಿತ್ವಕ್ಕೆ ಬಂದಿದೆ. ಎಲ್ಲರೂ ಕಾರ್ಖಾನೆಯ ಆಡಳಿತ ಹಿಡಿದಿಟ್ಟುಕೊಳ್ಳಲು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಚುನಾವಣೆಯಲ್ಲಿ ಗೆಲವು ಸಾಧ್ಯ ಎಂದರು.
ಬದಲಾವಣೆಯ ಗಾಳಿ ಬೀಸುತ್ತಿದೆ. ಪದೇ ಪದೇ ಅಧಿಕಾರ ರುಚಿ ಸವಿದವರು ಅಧಿಕಾರದ ದರ್ಪದಲ್ಲಿ ಸಾಗುತ್ತಿದ್ದಾರೆ. ಎಲ್ಲ ಕಡೆಗಳಲ್ಲಿಯೂ ಹಣ ಪ್ರಭಾವ ನಡೆಯುವುದಿಲ್ಲ. ಬಹಳಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿದವರು ಕಾರ್ಖಾನೆಯಲ್ಲಿ ಅಭಿವೃದ್ಧಿ ಮಾಡಿಲ್ಲ. ಮಾಜಿ ಶಾಸಕ ಬಿ.ಬಿ. ಹಿರೇರಡ್ಡಿ ಅವರು ಫೋಟೋ ಬಳಸಿಕೊಂಡು ಪ್ರತ್ಯೇಕ ಪೆನೆಲ್‌ನಲ್ಲಿ ಚುನಾವಣೆ ಎದುರಿಬೇಕಿದೆ ಎಂದು ಸಾಲಾಪೂರದ ಲಕ್ಷ್ಮಣ ಕನಸಗೇರಿ ಹೇಳಿದರು.ಕಳೆದ ಚುನಾವಣೆಯಲ್ಲಿ ಬಹುತೇಕ ಷೇರುದಾರರ ಮತದಾನ ಹಕ್ಕು ರದ್ದು ಪಡಿಸಿ ಕೆಲವೇ ಷೇರುದಾರರ ಮೂಲಕ ಅಧಿಕಾರಕ್ಕೆ ಬಂದಿರುವ ಹಾಲಿ ಆಡಳಿತ ಮಂಡಳಿ ಎಲ್ಲ ಕಸರತ್ತುಗಳನ್ನು ಮಾಡಲಿದೆ. ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಜ್ಜಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಮೇಶ ದೇಶಪಾಂಡೆ ಕರೆ ನೀಡಿದರು.
ಸುಮಾರು 19 ಸಾವಿರ ಷೇರುದಾರರಲ್ಲಿ ಕೇವಲ 4 ಸಾವಿರ ಷೇರುದಾರರಿಗೆ ಮತದಾನ ಹಕ್ಕು ನೀಡಿ ಗೆದ್ದಿರುವ ಯಾದವಾಡ ಕುಟುಂಬಕ್ಕೆ ತಕ್ಕ ಪಾಠ ಕಲಿಸಲು ಎಲ್ಲ ಷೇರುದಾರರು ಪಣ ತೊಡಬೇಕು. ಸಕ್ಕರೆ ಕಾರ್ಖಾನೆಯಿಂದ ಯಾದವಾಡ ಕುಟುಂಬ ತೊಲಗಿಸಿ ಆಂದೋಲನ ಮಾಡುವ ಮೂಲಕ ಷೇರುದಾರರು ಮೋಸ ಮಾಡಿದವರಿಗೆ ತಕ್ಕ ಉತ್ತರ ನೀಡಲು ಮುಂದಾಗಬೇಕು ಎಂದು ಬಿ.ಆರ್. ದೊಡಮನಿ (ರಡ್ಡಿ) ಹೇಳಿದರು.ಖಾನಪೇಟೆಯ ಧನಲಕ್ಣ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರಾಮದುರ್ಗ, ಬೈಲಹೊಂಗಲ, ಕಿತ್ತೂರು, ಸವದತ್ತಿ ಭಾಗದ ರೈತರೂ ಷೇರುದಾರರಿದ್ದಾರೆ. ಆಯಾ ಭಾಗಕ್ಕೂ ಒಂದೊಂದು ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಿಗೆ ಅವಕಾಶ ನೀಡಿ ಒಕ್ಕೂರಲಿನ ಒಗ್ಗಟ್ಟು ಪ್ರದರ್ಶಿಸಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಈ ವೇಳೆ ಪಂಚಮಸಾಲಿ ಸಮಾಜದ ಮುಖಂಡ ಪರುತಗೌಡ ಪಾಟೀಲ, ಸಿ.ಬಿ.ಪಾಟೀಲ, ವೈ.ಎಚ್. ಪಾಟೀಲ, ಲಚ್ಚಪ್ಪ ಕಾಮಣ್ಣವರ, ಬಸವರಾಜ ಹಿರೇರಡ್ಡಿ, ಕೆ.ವಿ. ಪಾಟೀಲ, ಮೆಟಗುಡ್ಡ, ಕಲ್ಲಣ್ಣ ವಜ್ರಮಟ್ಟಿ ಸೇರಿದಂತೆ ಸವದತ್ತಿ, ಕಿತ್ತೂರು, ಬೈಲಹೊಂಗಲ ಭಾಗದ ರೈತರು ಸಭೆಯಲ್ಲಿ ಇದ್ದರು.