ಧಾರವಾಡ:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ, ಚಿತ್ರನಟ ದರ್ಶನ್ ಅತ್ತ ಬಳ್ಳಾರಿ ಕಾರಾಗೃಹಕ್ಕೆ ತೆರಳುತ್ತಿದ್ದಂತೆ, ಧಾರವಾಡ ಕೇಂದ್ರ ಕಾರಾಗೃಹಕ್ಕೆ ಈ ಪ್ರಕರಣದ 9ನೇ ಆರೋಪಿ ಧನರಾಜ್ ಅವರನ್ನು ಕರೆತರಲಾಯಿತು.ಧನರಾಜ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಇಲ್ಲಿಯ ಕೇಂದ್ರ ಕಾರಾಗೃಹಕ್ಕೆ ಗುರುವಾರ ಮಧ್ಯಾಹ್ನ 1ರ ಹೊತ್ತಿಗೆ ಸ್ಥಳಾಂತರಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕಾರಾಗೃಹಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪರಪ್ಪನ ಅಗ್ರಹಾರದಲ್ಲಿ ದರ್ಶನ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಕುಳಿತು ಸಿಗರೇಟು ಸೇದಿ, ಚಹಾ ಕುಡಿದಿರುವ ಫೋಟೋ ವೈರಲ್ ಆದ ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅದರಂತೆ ದರ್ಶನ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲು ಇಲಾಖೆ ನಿರ್ಧರಿಸಿತ್ತು. ಈ ಪ್ರಕರಣದ 9ನೇ ಆರೋಪಿ ಧನರಾಜನನ್ನು ಇಲ್ಲಿಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.
ಯಾರಿವರು ಆರೋಪಿಗಳು?ಬೆಳಗಿನ ಜಾವ ಸುಮಾರು 4ಕ್ಕೆ ಬೆಂಗಳೂರಿನಿಂದ ಹೊರಟ ವಾಹನದಲ್ಲಿ 9ನೇ ಆರೋಪಿ ಧನರಾಜ್ ಹಾಗೂ 14ನೇ ಆರೋಪಿ ಪ್ರದೂಷ್ ನನ್ನು ಕರೆತರಲಾಯಿತು. ಹಿರಿಯೂರು, ಚಿತ್ರದುರ್ಗ, ಹಾವೇರಿ, ಹುಬ್ಬಳ್ಳಿ ಮಾರ್ಗವಾಗಿ ಆಗಮಿಸಿದ ಪೊಲೀಸ್ ವಾಹನ ಮಧ್ಯಾಹ್ನ 1ರ ಹೊತ್ತಿಗೆ ಧಾರವಾಡ ಕೇಂದ್ರ ಕಾರಾಗೃಹ ತಲುಪಿತು. ಧನರಾಜ್ ಕೊಲೆಗೆ ಬಳಸಲಾಗಿದ್ದ ಮೆಗ್ಗರ್ ಸಾಧನ ನೀಡಿರುವ ಆರೋಪ ಎದುರಿಸುತ್ತಿದ್ದರೆ, ಪ್ರದೂಷ್ ಕೊಲೆ ಬಳಿಕ ಶವವನ್ನು ಸಾಗಿಸಲು ಕಾರನ್ನು ನೀಡಿರುವ ಆರೋಪ ಎದುರಿಸುತ್ತಿದ್ದಾನೆ.
ಆರೋಗ್ಯ ತಪಾಸಣೆ:ಧಾರವಾಡ ಕೇಂದ್ರ ಕಾರಾಗೃಹಕ್ಕೆ ವಾಹನ ಬರುತ್ತಲೇ ಧನರಾಜನನ್ನು ಇಳಿಸಿ, ಮೊದಲಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಜೈಲಿನೊಳಗೆ ಕರೆದೊಯ್ಯಲಾಯಿತು. ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಆತನನ್ನು ಬ್ಯಾರಕ್‌ಗೆ ಸ್ಥಳಾಂತರ ಮಾಡಲಾಯಿತು. ಇತ್ತ ವಾಹನದಲ್ಲಿಯೇ ಕುಳಿತಿದ್ದ ಆರೋಪಿ ಪ್ರದೂಷ್ ಮೌನಕ್ಕೆ ಶರಣಾಗಿದ್ದ. ತಂದೆಯ ಅನಾರೋಗ್ಯದಿಂದ ಬೇರೆಡೆಗೆ ಸ್ಥಳಾಂತರ ಮಾಡದಂತೆ ಪ್ರದೂಷ ಮನವಿ ಮಾಡಿಕೊಂಡಿದ್ದನು. ಆದರೆ ಅದಕ್ಕೆ ಕೋರ್ಟ್ ಅನುಮತಿ ನೀಡಲಿಲ್ಲ. ಹೀಗಾಗಿ ಇದೀಗ ಪ್ರದೂಷನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಲಾಯಿತು.