ಕನ್ನಡಪ್ರಭ ವಾರ್ತೆ ಮದ್ದೂರು
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗ್ರಾಮೀಣ ಜನರ ಅಭ್ಯುದಯಕ್ಕೆ ಶ್ರಮಿಸುವ ಜತೆಗೆ ಕೆರೆ ನೀರನ್ನು ಕೆರೆಗೆ ಚೆಲ್ಲಿದಂತೆ ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾಗುತ್ತಿದೆ ಎಂದು ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ ತಿಳಿಸಿದರು.ಪಟ್ಟಣದ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಡಾ.ವೀರೇಂದ್ರ ಹೆಗಡೆ ಮತ್ತು ಮಾತೃಶ್ರೀ ಡಾ.ವಿ.ಹೇಮಾವತಿ ಹೆಗಡೆಯವರ ಮಾರ್ಗದರ್ಶನದೊಂದಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಸ್ವ-ಸಹಾಯ ಸಂಘಗಳ ಮೂಲ ಸಾಲ ನೀಡಿ ಮಹಿಳೆಯರ ಸಬಲೀಕರಣ, ನಿರ್ಗತಿಕರು, ಕಡುಬಡವರಿಗೆ ವಸತಿ ಹೀನರಿಗೆ ನೆರವು, ಸುಜ್ಞಾನ ನಿಧಿ ಶಿಷ್ಯವೇತನ ಯೋಜನೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದರು.ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ತಾಲೂಕಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ, ಕೆರೆ ಕಟ್ಟೆಗಳ ನಿರ್ಮಾಣ, ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ನೆರವು, ಶಾಲಾ ಕಾಲೇಜುಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು, ಸಮುದಾಯ ಭವನಗಳಿಗೆ ಅನುದಾನ ನೀಡುವ ಜೊತೆಗೆ ಮದ್ಯವರ್ಜನ ಶಿಬಿರಗಳ ಮೂಲಕ ದುಶ್ಚಟಕ್ಕೆ ಕಡಿವಾಣ ಹಾಕಲು ಸಂಸ್ಥೆ ಮುಂದಾಗಿರುವದು ಶ್ಲಾಘನೀಯ ಎಂದರು.
ಸಂಸ್ಥೆ ಯೋಜನಾ ನಿರ್ದೇಶಕ ಯೋಗೇಶ್ ಕನ್ಯಾಡಿ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ 799 ವಿದ್ಯಾರ್ಥಿಗಳಿಗೆ 98.5 ಲಕ್ಷ ರು.ಗಳನ್ನು ಶಿಷ್ಯವೇತನ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ 399 ವಿದ್ಯಾರ್ಥಿಗಳಿಗೆ 29.62 ಲಕ್ಷ ರು. ವಿತರಿಸಲಾಗುತ್ತಿದೆ ಎಂದರು.ಈಗಾಗಲೇ ಎಂಪಿಸಿಎಸ್ ಕಟ್ಟಡಕ್ಕೆ 2.5 ಕೋಟಿ, ದೇವಾಲಯ ಜೀರ್ಣೋದ್ಧಾರ 2.10 ಕೋಟಿ, ಶಾಲಾ ಕೊಠಡಿಗೆ ಪೀಠೋಪಕರಣ 1 ಲಕ್ಷ, ಅಂಬೇಡ್ಕರ್ ಸಮುದಾಯ ಭವನ 1 ಲಕ್ಷ ರು. ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಂಶುಪಾಲ ದಿನೇಶ್ ಪೂಜಾರಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಲಿಂಗೇಗೌಡ ಹಾಗೂ ಸೇವಾ ಪ್ರತಿನಿಧಿಗಳು ಹಾಜರಿದ್ದರು.