ಧರ್ಮಸ್ಥಳ ಸಂಸ್ಥೆ ರಾಜ್ಯದೆಲ್ಲೆಡೆ ಸೇವೆಯಲ್ಲಿದೆ: ಕೇಶವ ದೇವಾಂಗ ಅಭಿಮತ

KannadaprabhaNewsNetwork | Published : Apr 8, 2024 1:03 AM

ಸಾರಾಂಶ

ಗ್ರಾಮೀಣ ಅಭಿವೃದ್ಧಿ ಜೊತೆಗೆ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಮೂಲಕ ಸಂಸ್ಥೆ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೂ ದಾರಿ ತೋರಿಸುತ್ತಿದೆ. ಸಂಸ್ಥೆಯಲ್ಲಿ 45 ಸಾವಿರ ಜನ ಉದ್ಯೋಗದಲ್ಲಿದ್ದಾರೆ. ಸ್ವಯಂ ಉದ್ಯೋಗದ ಮೂಲಕ ಲಕ್ಷಾಂತರ ಜನ ಸಂಸ್ಥೆಯ ಮೂಲಕ ಪರೋಕ್ಷ ಉದ್ಯೋಗ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಳೆದ 41 ವರ್ಷಗಳ ಹಿಂದೆ ಸಾಮಾಜಿಕ ಸೇವೆ ಮೂಲಕ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಇಂದು ರಾಜ್ಯದ ಉದ್ದಗಲಕ್ಕೂ ತನ್ನ ಸೇವಾ ಕಾರ್ಯಗಳನ್ನು ವಿಸ್ತರಿಸಿಕೊಂಡಿದೆ ಎಂದು ಸಂಸ್ಥೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.

ಪಟ್ಟಣದ ಸಂಸ್ಥೆ ಕಚೇರಿಯಲ್ಲಿ ಆಯೋಜಿಸಿದ್ದ ಯೋಜನೆ ಸೇವಾ ಪ್ರತಿನಿಧಿಗಳ ಸಾಧಕ ಪುರಸ್ಕಾರ ಮತ್ತು ತಾಲೂಕು ಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಉಡುಪಿ ಜಿಲ್ಲೆಯ ಕಾಪು ತಾಲೂಕಿಗೆ ವರ್ಗಾವಣೆಯಾದ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಹಾಗೂ ರಾಯಚೂರು ಜಿಲ್ಲೆಗೆ ವರ್ಗಾವಣೆಗೊಂಡ ಯೋಜನೆ ಚನ್ನರಾಯಪಟ್ಟಣ ಜಿಲ್ಲೆಯ ಎಂಐಎಸ್ ಯೋಜನಾಧಿಕಾರಿ ತಿಲಕ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಅಭಿವೃದ್ಧಿ ಜೊತೆಗೆ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಮೂಲಕ ಸಂಸ್ಥೆ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೂ ದಾರಿ ತೋರಿಸುತ್ತಿದೆ. ಸಂಸ್ಥೆಯಲ್ಲಿ 45 ಸಾವಿರ ಜನ ಉದ್ಯೋಗದಲ್ಲಿದ್ದಾರೆ. ಸ್ವಯಂ ಉದ್ಯೋಗದ ಮೂಲಕ ಲಕ್ಷಾಂತರ ಜನ ಸಂಸ್ಥೆಯ ಮೂಲಕ ಪರೋಕ್ಷ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಸಿರಿ ಉತ್ಪನ್ನಗಳ ಮೂಲಕ ಸ್ವ - ಸಹಾಯ ಸಂಘದ ಮಹಿಳೆಯರ ಗೃಹ ಉತ್ಪನ್ನಗಳು ಮತ್ತು ರೈತರ ಉತ್ಪನ್ನಗಳಿಗೆ ಸಂಸ್ಥೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಇದಕ್ಕೆ ಸಂಸ್ಥೆ ಮೂಲ ತಳಹದಿಗಳಾದ ಸೇವಾ ಪ್ರತಿನಿಧಿಗಳ ನಿಸ್ವಾರ್ಥ ಸೇವೆಯೇ ಕಾರಣ ಎಂದು ತಿಳಿಸಿದರು.

ಸಂಸ್ಥೆಯ ಎಲ್ಲಾ ಸೇವಾ ಪ್ರತಿನಿಧಿಗಳು ಸಾಧಕರೇ ಆಗಿದ್ದಾರೆ. ಆದ ಕಾರಣ ನಾವು ಪ್ರತಿಯೊಂದು ಸೇವಾ ವಲಯದಿಂದಲೂ ಸಾಧಕರಲ್ಲಿ ಸಾಧಕರನ್ನು ಗುರುತಿಸಿ ಇಂದು ಗೌರವಿಸುವ ಮೂಲಕ ಸಾಧಕರನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಸಂಸ್ಥೆ ಯೋಜನಾಧಿಕಾರಿಗಳಾಗಿ ಕಳೆದ ಐದು ವರ್ಷಗಳಿಂದ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿರುವ ಮಮತಾಶೆಟ್ಟಿ ಅವರ ಸಮಾಜಮುಖಿ ಕಾಳಜಿಯು ನಾಗರಿಕ ಸಮಾಜದ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ವರ್ಗಾವಣೆಗೊಂಡ ಯೋಜನಾಧಿಕಾರಿ ಮಮತಾಶೆಟ್ಟಿ ಮಾತನಾಡಿ, ಕಳೆದ 5 ವರ್ಷಗಳಿಂದ ತಮಗೆ ಅಗತ್ಯ ಸಹಕಾರ ನೀಡಿ ಧರ್ಮಸ್ಥಳ ಸಂಸ್ಥೆ ಯೋಜನೆಗಳ ವಿಸ್ತರಣೆಗೆ ಕಾರಣಕರ್ತರಾದ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗ್ರಾಮಗಳ ಮುಖಂಡರು, ಪತ್ರಕರ್ತರು ಸೇರಿದಂತೆ ತಾಲೂಕಿನ ಜನತೆಗೆ ಧನ್ಯವಾದ ಸಮರ್ಪಿಸಿದರು.

ಸಮಾರಂಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಶಿಳನೆರೆ ಅಂಬರೀಶ್, ಹಿರಿಯ ಪತ್ರಕರ್ತರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಮರುವನಹಳ್ಳಿ ಬಸವರಾಜು, ತಾಲೂಕು ಜ್ಞಾನವಿಕಾಸ ಅಧಿಕಾರಿ ಕಾವ್ಯ ಲೋಕೇಶ್, ಮೇಲ್ವಿಚಾರಕರಾದ ಶಿಲ್ಪಾ, ಮಮತಾ, ಎಂಐಎಸ್ ಯೋಜನಾಧಿಕಾರಿ ತಿಲಕ್ ಸೇರಿದಂತೆ ಸೇವಾ ಪ್ರತಿನಿಧಿಗಳು ಇದ್ದರು.

Share this article