ಧರ್ಮಸ್ಥಳ ಸಿರಿ ಸಂಸ್ಥೆ ನೂತನ ಉತ್ಪಾದನಾ ಸಂಕೀರ್ಣ ಪೂಜೆ

KannadaprabhaNewsNetwork | Published : Mar 21, 2025 12:32 AM

ಸಾರಾಂಶ

ಸಿರಿ ಸಂಸ್ಥೆ ವತಿಯಿಂದ ಬೆಳ್ತಂಗಡಿಯ ರೆಂಕೆದಗುತ್ತಿನಲ್ಲಿ ನಿರ್ಮಾಣವಾದ ನೂತನ ಉತ್ಪಾದನಾ ಸಂಕೀರ್ಣದ ಪೂಜಾ ಸಮಾರಂಭ ಗುರುವಾರ ವೇದಮೂರ್ತಿ ನಾಗೇಂದ್ರ ಗುರೂಜಿ ನೇತೃತ್ವದಲ್ಲಿ ಜರಗಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಿರಿ ಸಂಸ್ಥೆ ವತಿಯಿಂದ ಬೆಳ್ತಂಗಡಿಯ ರೆಂಕೆದಗುತ್ತಿನಲ್ಲಿ ನಿರ್ಮಾಣವಾದ ನೂತನ ಉತ್ಪಾದನಾ ಸಂಕೀರ್ಣದ ಪೂಜಾ ಸಮಾರಂಭ ಗುರುವಾರ ವೇದಮೂರ್ತಿ ನಾಗೇಂದ್ರ ಗುರೂಜಿ ನೇತೃತ್ವದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಸ್ಥಾಪಕಾಧ್ಯಕ್ಷ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ ಗ್ರಾಮೀಣ ಉದ್ಯೋಗ ಮತ್ತು ಉತ್ಪಾದನೆ ದೃಷ್ಟಿಯಲ್ಲಿ ಆರಂಭಗೊಂಡ ಸಿರಿ ಸಂಸ್ಥೆ ಇಂದು ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸುತ್ತಿರುವುದು ಶ್ಲಾಘನೀಯ. ಸಿಬ್ಬಂದಿ ಇದು ನಮ್ಮದೇ ಸಂಸ್ಥೆ ಎಂಬ ಭಾವನೆಯಿಂದ ದುಡಿಯುತ್ತ ವ್ಯವಸ್ಥೆಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ಕೆಟ್ಟ ಶಕ್ತಿ,ದುಷ್ಟ ಶಕ್ತಿಗಳ ಪ್ರವೇಶ ತಡೆಯಲು ಪೂಜಾದಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.

ಅಪರೂಪದ ವಿಚಾರಗಳು ಪ್ರತಿಭೆಗಳು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟಿವೆ ಎಂಬುದು ಸಿರಿ ಸಂಸ್ಥೆಯಿಂದ ಸಾಬೀತಾಗಿದೆ. ಉತ್ತಮ ಗುಣಮಟ್ಟ, ಮಿತ ದರದಲ್ಲಿ ವಸ್ತುಗಳನ್ನು ಒದಗಿಸುವ ಧ್ಯೇಯದೊಂದಿಗೆ ಸಂಸ್ಥೆಯು ಮುನ್ನುಗ್ಗುತ್ತಿದೆ ಎಂದರು.

ಹೇಮಾವತಿ ವೀ. ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಸೋನಿಯಾ ವರ್ಮ, ಪೂರನ್ ವರ್ಮ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮತ್ತಿತರರು ಇದ್ದರು.

ಸಂಸ್ಥೆಯ ಎಂಡಿ ಕೆ.ಎನ್. ಜನಾರ್ದನ್ ಸ್ವಾಗತಿಸಿ, ಜೀವನ್ ಕುಮಾರ್ ನಿರೂಪಿಸಿದರು..............................

ಒಂದೇ ಸೂರಿನಡಿ ಎಲ್ಲ ಸೌಲಭ್ಯಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿರುವ ಸಿರಿ ಸಂಸ್ಥೆಯ ವಿಸ್ತೃತ ಕಟ್ಟಡ 1,53,000 ಚದರ ಅಡಿಗಳಿಗಿಂತ ಅಧಿಕ ವಿಸ್ತೀರ್ಣ ಹೊಂದಿದೆ. ಎಲ್ಲಾ ಸೌಲಭ್ಯ ಒಂದೇ ಸೂರಿನಡಿ ಇರುವ ಇಲ್ಲಿ ಟೆಕ್ಸ್ ಟೈಲ್, ಗೋದಾಮು, ಕಚೇರಿ, ಕ್ಯಾಂಟೀನ್, ಗ್ಯಾರೇಜ್ ಸಹಿತ ನಾನಾ ವಸ್ತುಗಳ ಉತ್ಪಾದನಾ ವಿಭಾಗಗಳಿವೆ.

20 ಕೋಟಿ ರು.ಗಿಂತ ಅಧಿಕ ಮೌಲ್ಯದ ಸುಸಜ್ಜಿತ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ವಾರ್ಷಿಕ 32 ಕೋಟಿ ರು. ವ್ಯವಹಾರ ನಡೆಸುತ್ತಿರುವ ಸಂಸ್ಥೆ ಈಗಾಗಲೇ 13 ಪ್ರತಿಷ್ಠಿತ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ.

Share this article