ಕನ್ನಡಪ್ರಭ ವಾರ್ತೆ ಬೇಲೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ತೊಳಲು ಗ್ರಾಪಂ ಕೊನೆರ್ಲು ಗ್ರಾಮದ ಊರ ಮುಂದಿನ ದ್ಯಾವನಕೆರೆ ಅಭಿವೃದ್ಧಿ ಮತ್ತು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ೪೮೬ ನೇ ನಮ್ಮೂರು ನಮ್ಮ ಕೆರೆ ನಾಮಫಲಕ ಅನಾವರಣ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮ ಜರುಗಿತು.ಎಸ್ ಕೆ ಡಿಆರ್ಪಿ ಬಿಸಿ ಟ್ರಸ್ಟ್ ನ ನಿರ್ದೇಶಕಿ ಮಮತಾ ಹರೀಶ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಕೆಲಸಗಳು ನಿರ್ವಹಣೆಯಾಗುತ್ತಿದ್ದು, ಅದರಲ್ಲಿ ಹಳ್ಳಿಗಳಲ್ಲಿ ಕೆರೆಗಳನ್ನು ಹೂಳೆತ್ತುವ ಕೆಲಸ ಮಾಡುತ್ತಿದೆ. ಕೊನೆರ್ಲು ಗ್ರಾಮದಲ್ಲೂ ಸಹ ಕೆರೆಯನ್ನು ಅಭಿವೃದ್ದಿ ಮಾಡಲಾಗಿದೆ. ಇದನ್ನು ಉಳಿಸಿಕೊಂಡು ಹೋಗುವ ಕೆಲಸ ನಿಮ್ಮದಾಗಬೇಕು.
ಗ್ರಾಮೀಣ ಪ್ರದೇಶದ ಕೆರೆಗಳು ಪ್ರತಿಯೊಂದು ಊರಿನ ಸಮೃದ್ಧಿಯ ಪ್ರತೀಕವಾಗಿವೆ. ಗ್ರಾಮೀಣ ಜನರ ಜೀವನವು ಸಂಪೂರ್ಣವಾಗಿ ಕೆರೆಗಳ ಮೇಲೆಯೇ ಅವಲಂಬಿತವಾಗಿದೆ. ಅಚ್ಚುಕಟ್ಟಿನ ಪ್ರದೇಶ ಗುರುತಿಸಿ ಅಲ್ಲಿ ವ್ಯವಸ್ಥಿತವಾಗಿ ಕೆರೆಗಳನ್ನು ನಿರ್ಮಿಸಿರುವ ನಮ್ಮ ಪೂರ್ವಜರ ಸಾಧನೆಯೇ ಅದ್ಭುತ. ಅಂತರ್ಜಲದ ಮುಖ್ಯ ಸೆಲೆಯಾಗಿದ್ದ ಈ ಕೆರೆಗಳು ಮಳೆಗಾಲದಲ್ಲಿಯೇ ನೀರು ತುಂಬದ ಮಟ್ಟಕ್ಕೆ ಬಂದಿದೆ ಎಂದರು.ಕೆರೆಗಳ ಇಂದಿನ ದುಃಸ್ಥಿತಿಗೆ ನೇರವಾಗಿ ಮಾನವನೇ ಹೊಣೆ ಹೊರತು ಬೇರೆ ಯಾರೂ ಅಲ್ಲ. ಹಾಗಾಗಿ ಇಂದು ಹೆಚ್ಚುತ್ತಿರುವ ನೀರಿನ ಬೇಡಿಕೆಗೆ ಕೆರೆಗಳನ್ನು ಪುನಃಶ್ಚೇತನಗೊಳಿಸದ ಹೊರತು ಬೇರೆ ಯಾವುದೇ ಮಾರ್ಗೋಪಾಯಗಳು ಇಲ್ಲವಾಗಿದೆ. ಇಂದಿನ ಬರಗಾಲದ ಪರಿಸ್ಥಿತಿಗೆ ಪ್ರತಿಯೊಂದು ಕೆರೆಗಳ ಹೂಳೆತ್ತಿ ಅವುಗಳ ಜೀರ್ಣೋದ್ಧಾರಗೊಳಿಸುವ ಅವಶ್ಯಕತೆ ಇದೆ. ಆದರೆ ಪುನಃಶ್ಚೇತನದ ಕೆಲಸವು ಸ್ಥಳೀಯರ ಮೂಲಕವೇ ನಡೆಯಬೇಕೆಂಬ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ನೇತೃತ್ವದಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರ ಮಾರ್ಗದರ್ಶನದಲ್ಲಿ 2016 ರಲ್ಲಿ “ನಮ್ಮೂರು ನಮ್ಮ ಕೆರೆ’ ಯೋಜನೆಯನ್ನು ರೂಪಿಸಿದೆ. ಎಸ್ ಕೆ ಡಿಆರ್ ಡಿ ಪಿ ಯ ಆರ್ಥಿಕ ಸಹಕಾರದೊಂದಿಗೆ ಸ್ಥಳೀಯರ ಸಹಭಾಗಿತ್ವದಲ್ಲಿ ಕೆರೆಗಳನ್ನು ಪುನಃಶ್ಚೇತನಗೊಳಿಸುವ “ನಮ್ಮೂರು ನಮ್ಮ ಕೆರೆ’ ಯೋಜನೆಯನ್ನು ತಾಲೂಕಿನ ಕೊನೇರ್ಲು ಗ್ರಾಮದಲ್ಲಿ ಮಾಡಲಾಗಿದೆ ಎಂದರು.
ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಜಯರಾಂ ಮಾತನಾಡಿ, ಸಂಘಗಳ ಗುಣಮಟ್ಟದ ನಿರ್ವಹಣೆ, ಸರ್ಕಾರಿ ಮತ್ತು ಯೋಜನೆಯ ಸೌಲಭ್ಯಗಳ ಒದಗಿಸುವುದು, ನಿರಂತರ ಅನುಪಾಲನೆ ಹಾಗೂ ಪ್ರಾದೇಶಿಕ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಮಾರ್ಗದರ್ಶನಕ್ಕೆ ಅನುಕೂಲವಾಗುವಂತೆ 25 ರಿಂದ 30 ಸಂಘಗಳ ನಿರ್ವಹಣೆಗೆ ಅನುಕೂಲವಾಗುವಂತೆ ಒಕ್ಕೂಟಗಳ ರಚನೆ ಮಾಡಲಾಗಿದ್ದು, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಹಾಗೂ ಸಂಘಗಳ ಗುಣಮಟ್ಟ ಸುಧಾರಣೆಯಲ್ಲಿ ವಿಶೇಷ ಕೆಲಸ ನಿರ್ವಹಿಸಲಾಗುತ್ತದೆ ಎಂದರು.ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್,ತೊಳಲು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ರಂಜಿತಾ,ಕೆರೆ ಸಮಿತಿ ಅಧ್ಯಕ್ಷ ಉಮೇಶ್,ಶಂಕರ್,ಮಂಜೇಗೌಡ,ಶೋಭಾ ಗಣೇಶ್,ಭರತ್ ,ಲತಾ,ಅಜಿತ್,ಸೇವಾಪ್ರತಿನಿಧಿ ಶಿವಣ್ಣ,ಪ್ರತಿಭಾ ಹಾಗೂ ಗ್ರಾಮಸ್ಥರು ಹಾಜರಿದ್ದರು.