ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಕೆ.ಸಿ.ರಾಜಕಾಂತ್ ಮಾತನಾಡಿ, ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರವು ಬೇರ್ಪಟ್ಟು ಪ್ರತ್ಯೇಕ ಜಿಲ್ಲಾಕೇಂದ್ರವಾದ ಬಳಿಕ ಬಡವರ ಸಮಸ್ಯೆಗಳು ಈಡೇರಲಿವೆ ಎಂಬ ಭರವಸೆಯಿತ್ತು. ಅದು ಹುಸಿಯಾಗಿದೆ ಎಂದರು.
ಬಡವರಿಗಿಲ್ಲ ನಿವೇಶನ ಭಾಗ್ಯ!ಜಿಲ್ಲೆಗೆ ಬಂದಿರುವ ಅಧಿಕಾರಿಗಳು ಬಡವರ, ದಲಿತರ ಮತ್ತು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಹುಸಿ ಭರವಸೆ ನೀಡುತ್ತಿರುವುದರಿಂದ ಮತ್ತಷ್ಟು ಉಲ್ಬಣಗೊಂಡಿವೆಯೇ ಹೊರತು ಈಡೇರುವ ಆಶಾಭಾವನೆ ಇಲ್ಲದಂತಾಗಿದೆ. ಕಳೆದ 1993ರಲ್ಲಿ ಅಂದಿನ ಸಚಿವೆ ರೇಣುಕಾರಾಜೇಂದ್ರನ್ ಅವರ ಕಾಲದಲ್ಲಿ ನಲ್ಲಕದಿರೇನ ಹಳ್ಳಿಯ ನಿವೇಶನರಹಿತರಿಗೆ 3 ಎಕರೆ ಜಮೀಜು ಮಂಜೂರು ಮಾಡಿದ್ದರು. ಅಲ್ಲದೆ ಗುಡಿಬಂಡೆಯ ರಸ್ತೆ ಅಗಲೀಕರಣ ವೇಳೆ ಮನೆಗಳನ್ನು ಕಳೆದುಕೊಂಡ ಕಡೇಹಳ್ಳಿಯ ಗ್ರಾಮಸ್ಥರಿಗಾಗಿ ಸಂಬಂಧಪಟ್ಟ ಇಲಾಖೆಯಿಂದ ಜಮೀನು ಮಂಜೂರಾಗಿದೆ. ಆದರೆ ಇಂದಿಗೂ ಬಡಾವಣೆಗಳನ್ನು ನಿರ್ಮಿಸಿ ನಿವೇಶನ ನೀಡಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು. ನಿವೇಶನಗಳನ್ನು ವಿತರಣೆ ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ ವೇಳೆ ಖುದ್ದು ಜಿಲ್ಲಾಧಿಕಾರಿಯೇ ವಾರದೊಳಗೆ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧ ಪಟ್ಟ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರೂ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಅಧಿಕಾರಿಗಳು, ನ್ಯಾಯ ಕೇಳುವ ಬಡವರ ಮೇಲೆ ಮೊಕದ್ದಮೆಗಳನ್ನು ದಾಖಲಿಸುತ್ತಾರೆ ಎಂದರು.ಸಮಿತಿಗಳನ್ನೇ ರಚಿಸಿಲ್ಲ
ಬಡಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುವ ಪರಿಶಿಷ್ಟರ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದ್ದು, ಐದಾರು ಹಾಸ್ಟೆಲ್‌ಗಳ ಜವಾಬ್ದಾರಿ ಓರ್ವ ವಾರ್ಡನ್ ನಿರ್ವಹಿಸುವ ಮೂಲಕ ಬಡ ಮಕ್ಕಳ ಶೈಕ್ಷಣಿಕ ಜೀವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಡವರ ಮಕ್ಕಳ ಕುರಿತು ಪುಂಖಾನುಪುಂಖವಾಗಿ ಭಾಷಣ ಮಾಡುವವರು ಈ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಎನ್.ಪರಮೇಶ್, ಟೈಲರ್ ಮುನಿರಾಜು, ನರಸಿಂಹಮೂರ್ತಿ,ತ್ಯಾಗರಾಜು , ಕರಗಪ್ಪ, ಮುನಿನಾರಾಯಣಪ್ಪ, ಚಿನ್ನಪ್ಪ,ಕಣಿತಹಳ್ಳಿ ಮುನಿಯಪ್ಪ, ಜಿಲ್ಲಾ ಗಡಿನಾಡು ರೈತ ಸಂಘದ ಉಪ್ಪಾರ ಬಿ.ವೆಂಕಟೇಶ್,ಟಿ.ಮುನಿರಾಜು, ಎಸ್.ಡಿ.ರಾಮಕೃಷ್ಣ, ಎಂ.ಎನ್.ರಾಜಶೇಖರರೆಡ್ಡಿ, ಚಂದ್ರಪ್ಪ, ಮತ್ತಿತರರು ಇದ್ದರು.