ಅಕ್ರಮ ಕ್ರಷರ್‌ಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಧರಣಿ

KannadaprabhaNewsNetwork | Published : Jun 29, 2024 12:39 AM

ರಟ್ಟೀಹಳ್ಳಿ ತಾಲೂಕಿನ ಬೆಳ್ಳೂರ ವ್ಯಾಪ್ತಿಯ ಮಾಸೂರ ಶಿಕಾರಿಪುರ ಮಾರ್ಗದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿನ ಕ್ರಷರ್ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದ ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿದರು.

ರಟ್ಟೀಹಳ್ಳಿ: ತಾಲೂಕಿನ ಬೆಳ್ಳೂರ ವ್ಯಾಪ್ತಿಯ ಮಾಸೂರ ಶಿಕಾರಿಪುರ ಮಾರ್ಗದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿನ ಕ್ರಷರ್ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದ ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿದರು.

ಇದೇ ಸಂದರ್ಭದಲ್ಲಿ ಹಿರೇಕೆರೂರ ತಾಲೂಕು ಅಧ್ಯಕ್ಷ ಕುಮಾರ ದ್ಯಾವಣ್ಣನವರ ಮಾತನಾಡಿ, ಮಾಸೂರ ಶಿಕಾರಿಪುರ ಮಾರ್ಗವಾಗಿ ಹಾದು ಹೋಗಿರುವ ಪಿ.ಡಬ್ಲೂ.ಡಿ ರಸ್ತೆ ಪಕ್ಕದ ಜಮೀನಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕಲ್ಲಿನ ಕ್ರಷರ್ ಕಳೆದ ಒಂದು ವರ್ಷದಿಂದ ಆಯಾ ಇಲಾಖೆಗಳಿಂದ ಪರವಾನಗಿ ಪಡೆಯದೆ ಅನಧಿಕೃತವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಎರಡು ಮೂರು ಬಾರಿ ಲಿಖಿತವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಅಕ್ರಮ ಕಲ್ಲಿನ ಕ್ರಷರ್‌ನಿಂದಾಗಿ ಅಕ್ಕಪಕ್ಕದ ಜಮೀನಿನ ರೈತರುಗಳಿಗೆ ತೊಂದರೆಯಾಗುತ್ತಿದ್ದು ಬೆಳೆದ ಬೆಳೆಗಳಿಗೆ ಧೂಳಿನಿಂದಾಗಿ ಹಾನಿಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಉಳ್ಳವರಿಗೆ ಕಾನೂನು ಎಂಬಂತೆ ವರ್ತಿಸುತ್ತಿದ್ದಾರೆ. ಕಾರಣ ತಕ್ಷಣ ಅಕ್ರಮವಾಗಿ ನಡೆಯುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಹೋರಾಟ ಉಗ್ರ ರೂಪ ತಾಳಲಿದೆ ಎಂದು ಎಚ್ಚರಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ನಡುವಿನಮನಿ ಮಾತನಾಡಿ, ಅಕ್ರಮ ಕಲ್ಲಿನ ಕ್ರಷರ್ ಮಾಲಿಕ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಳೆದ ಒಂದು ತಿಂಗಳ ಹಿಂದೆ ಮನವಿ ಸಲ್ಲಿಸಿದರೂ ತಕ್ಕ ಉತ್ತರ ನೀಡದೆ ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹೆಸ್ಕಾಂ ಇಲಾಖೆಯಿಂದ ಕೇವಲ 5 ಯೂನಿಟ್ ವಿದ್ಯುತ್ ಬಳಕೆಯ ಪರವಾನಗಿ ಪಡೆದು ಬೃಹತ್ತಾಕಾರದ ಕ್ರಷರ್ ನಡೆಸುತ್ತಿದ್ದಾರೆ, ತುಂಗಾ ಮೇಲ್ದಂಡೆ ಕಾಲುವೆಗಳಿಂದ ಕಲ್ಲುಗಳನ್ನು ತಂದು ಇಲ್ಲಿ ತಮಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡು ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಪರಿಸರ ಇಲಾಖೆ, ಮೈನ್ಸನಿಂದ ಪಡೆದ ರಾಯಲ್ಟಿಗಿಂತ ಹೆಚ್ಚಿನ ಅಕ್ರಮ ಕಲ್ಲು ಗಣಿಗಾರಿಕೆ ಹೀಗೆ ಅನೇಕ ಇಲಾಖೆಗಳಿಂದ ಪರವಾನಗಿ ಪಡೆಯದೆ ಕ್ರಷರ್ ನಡೆಸುತ್ತಿದ್ದಾರೆ. ಈ ಮಾರ್ಗವಾಗಿ ಸಂಚರಿಸುವ ವಾಹನಗಳು ಧೂಳಿನಿಂದ ಅಪಘಾತಗಳಾಗಿವೆ. ಇಷ್ಟಾದರೂ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಕಾರಣ ಸಂಬಂಧ ಪಟ್ಟ ಎಲ್ಲ ಇಲಾಖೆಗಳು ಬಂದು ಸ್ಥಳ ಪರಿಶೀಲನೆ ನಡೆಸಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟವನ್ನು ನಿರಂತರಗೊಳಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಸುನೀಲ ನಾಯಕ, ಕರಿಯಪ್ಪ ಕೊರವರ, ರಾಮಣ್ಣ ಮಾದಾಪುರ, ಪ್ರವೀಣ ಮಾದಾಪುರ, ಮಂಜುನಾಥ ಕಾಯ್ಕದ, ಹಜರತ್ ಅಲಿ ಕಿರಗೇರಿ, ಚಿಕ್ಕಮ್ಮ ಹರಿಜನ, ಗದಿಗೆಮ್ಮ ಶಿರಗಂಬಿ, ಹೂವಕ್ಕ ಹರಿಜನ, ರೂಪಾ ಕೊರವರ, ಎಲ್ಲಮ್ಮ ಕೊರವರ, ಮೀನಾಕ್ಷಿ ಕೊರವರ, ಯಮುನಮ್ಮ ಕೊರವರ, ಶಾಂತಮ್ಮ ಹರಿಜನ, ಹನುಮಂತಪ್ಪ ಹರಿಜನ, ಸುಮಾ ಗಂಗಣ್ಣನವರ, ಸುನೀತಾ ಕೊರವರ, ಮುಂತಾದವರು ಇದ್ದರು.