ಕುಮಟಾ: ಯಕ್ಷಗಾನ ಸಂಸ್ಕಾರ ಕಲಿಸುವ ಕಲೆ. ಯಕ್ಷಗಾನವನ್ನು ಕಲಿಯಬೇಕು, ಕಲಿಸಬೇಕು ಮತ್ತು ಯಕ್ಷಗಾನವನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಪಟ್ಲ ಧ್ರುವ ಫೌಂಡೇಷನ್ ಸಂಸ್ಥಾಪಕ ಭಾಗವತ ಪಟ್ಲ ಸತೀಶ ಶೆಟ್ಟಿ ತಿಳಿಸಿದರು.
ಪಟ್ಟಣದ ರಥಬೀದಿಯಲ್ಲಿ ಇತ್ತೀಚೆಗೆ ಪಾವಂಜೆ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಸನ್ಮಾನಿತರಾಗಿ, ದಿ. ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಧಾರೇಶ್ವರರದ್ದು ಬಹುಮುಖ ಪ್ರತಿಭೆ. ಉತ್ತಮ ಮಾರ್ಗದರ್ಶಕರಾಗಿದ್ದರು ಎಂದರು. ಹವ್ಯಾಸಿ ಕಲಾವಿದ ಚಿದಾನಂದ ಭಂಡಾರಿ ಮಾತನಾಡಿ, ಪಟ್ಲ ಸತೀಶ ಶೆಟ್ಟಿಯವರು ಯಕ್ಷಗಾನ ಭಾಗವರಾಗಿ ವಿದೇಶಗಳಲ್ಲಿಯೂ ಬಹಳ ಪ್ರಸಿದ್ಧರು. ಪಟ್ಲ ದ್ರುವ ಫೌಂಡೇಷನ್ ಮುಖಾಂತರ ಯಕ್ಷಗಾನ ಕಲಾವಿದರ ಬಾಳಿಗೆ ಬೆಳಕಾಗಿದ್ದಾರೆ. ನಮ್ಮಲ್ಲಿನ ಅನೇಕ ಕಲಾವಿದರನ್ನುಅಖಂಡ ದಕ್ಷಿಣ ಕನ್ನಡದ ಉಡುಪಿ ಮಂಗಳೂರಿನವರು ಪ್ರೋತ್ಸಾಹಿಸಿ ಮುನ್ನೆಲೆಗೆ ತಂದಿದ್ದಾರೆ. ಇಂದು ಉಡುಪಿ, ದಕ್ಷಿಣ ಕನ್ನಡದ ಅಭಿವೃದ್ಧಿಯಲ್ಲಿ ಯಕ್ಷಗಾನದ ಪಾತ್ರವೂ ಇದೆ. ಸತೀಶ ಶೆಟ್ಟಿಯವರು ಯಕ್ಷಗಾನಕ್ಕೆ ಸಾಕಷ್ಟು ಸೇವೆ ನೀಡುತ್ತಿದ್ದಾರೆ. ಅವರಿಗೂ ಪದ್ಮಶ್ರೀ ದೊರೆಯುವಂತಾಗಲಿ ಎಂದು ಆಶಿಸಿದರು.ಯಕ್ಷಗಾನ- ತಾಳಮದ್ದಳೆ ಕಲಾವಿದ ನಾರಾಯಣ ಭಟ್ ಕೆರೆ, ಪ್ರೊ. ಎಂ.ಜಿ ಭಟ್ಟ, ಸೈಂಟ್ ಮಿಲಾಗ್ರೀಸ್ ಕೋ ಆಪರೇಟಿವ್ ಬ್ಯಾಂಕಿನ ಸಂಸ್ಥಾಪಕ ಜಾರ್ಜ ಫರ್ನಾಂಡೀಸ್ ಮಾತನಾಡಿದರು. ಯಕ್ಷಗಾನ ಸಂಘಟಕ ಪ್ರಕಾಶ ನಾಯ್ಕ, ಪುರಸಭಾ ಸದಸ್ಯೆ ಪಲ್ಲವಿ ಮಡಿವಾಳ, ಯಕ್ಷಗಾನ ಕಲಾವಿದ ಗಣಪತಿ ನಾಯ್ಕ, ಶ್ರೀಪತಿ ನಾವಡ, ಚಿದಾನಂದ ಭಂಡಾರಿ, ಅಶೋಕ ಕಾಮತ, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಲಕ್ಷ್ಮೀದಾಸ ನಾಯಕ, ಅಶೋಕ ಶಾನಭಾಗ, ತ್ರಿವಿಕ್ರಮ ಶಾನಭಾಗ, ವಸುದೇವ ಪ್ರಭು ಇದ್ದರು. ಪ್ರೊ. ಮಂಜುನಾಥ ಭಂಡಾರಿ ನಿರೂಪಿಸಿ, ವಂದಿಸಿದರು. ಬಳಿಕ ಧರ್ಮಸಿಂಹಾಸನ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶಿತಗೊಂಡಿತು.