ಮಾರುತಿ ಶಿಡ್ಲಾಪುರ
ಹಾನಗಲ್ಲ ತಾಲೂಕಿನ 28 ಗ್ರಾಮಗಳ ಕೃಷಿಭೂಮಿಗೆ ನೀರೊದಗಿಸುವ ಧರ್ಮಾ ಜಲಾಶಯದ ಕಾಲುವೆ 30 ಕಿಮೀ ಮುಖ್ಯ ಕಾಲುವೆಯೊಂದಿಗೆ 35 ಕಿಮೀ ಉಪಕಾಲುವೆಯನ್ನೂ ಹೊಂದಿದೆ. 20 ವರ್ಷಗಳ ಹಿಂದೆ ಕಾಲುವೆಗೆ ಕಾಂಕ್ರೀಟ್ ಹಾಕಲಾಗಿತ್ತು. ಈಗ ಕಾಂಕ್ರೀಟಿನ ಮೇಲೆ ಇರುವ ಮಣ್ಣು ತೆಗೆದು, ಇಡೀ ಕಾಲುವೆ ದುರಸ್ತಿಗೆ ಬೃಹತ್ ನೀರಾವರಿ ಇಲಾಖೆ ಮುಂದಾಗಿದೆ.
ಈ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ 98 ಕೆರೆಗಳನ್ನು ತುಂಬುವ ಯೋಜನೆಯೂ ಇದೆ. ಇದರಲ್ಲಿ 40 ಕೆರೆ ಹೂಳೆತ್ತುವುದು, ತೂಬು ರಿಪೇರಿ, ಕೋಡಿ ರಿಪೇರಿ, ಜಂಗಲ್ ಕಟಿಂಗ್, ಗೇಟ್ ಅಳವಡಿಕೆಯೂ ಸೇರಿದೆ. 20 ವರ್ಷಗಳಿಂದ ಹೂಳು ಜಮಾ ಆಗುತ್ತಿದೆ. ಕೃಷಿ ಭೂಮಿಯಿಂದ ಹರಿದು ಬಂದ ಫಲವತ್ತಾದ ಮಣ್ಣಾಗಿರುವುದರಿಂದ ಕೃಷಿ ಭೂಮಿಗೆ ರೈತರು ಬಳಸಬಹುದಾಗಿದೆ.ಇದರೊಂದಿಗೆ ಇಡೀ ಮುಖ್ಯ ಕಾಲುವೆ, ಉಪ ಕಾಲುವೆ ವ್ಯಾಪ್ತಿಯ 30 ಕಿಮಿ ಸರ್ವೀಸ್ ರಸ್ತೆ ಕೂಡ ಮೆಟ್ಲಿಂಗ್ ಮಾಡಲಾಗುತ್ತದೆ.
₹50 ಕೋಟಿಯ ಕಾಮಗಾರಿ ಕೈಗೊಂಡಿರುವುದರಿಂದ ಈ ಬಾರಿ ರೈತರು ಧರ್ಮಾ ಜಲಾಶಯವನ್ನು ಆಶ್ರಯಿಸಿ ಬೇಸಿಗೆ ಬೆಳೆ ಬೆಳೆಯುವುದನ್ನು ಕೈ ಬಿಟ್ಟಿದ್ದಾರೆ. ಇಡೀ ಕಾಮಗಾರಿ ಮುಗಿಯುವ ವರೆಗೆ ನೀರು ಹರಿಸಲು ಸಾಧ್ಯವಿಲ್ಲ. ಈ ವಿಷಯವನ್ನು ಸಭೆ ನಡೆಸಿ ರೈತರ ಗಮನಕ್ಕೆ ತರಲಾಗಿದೆ.
ಮಾರ್ಚ್ ಅಂತ್ಯಕ್ಕೆ ಪೂರ್ಣ: ಕಾಲುವೆ ಕಾಂಕ್ರೀಟೀಕರಣ ಆದ ಮೇಲೆ ಇದರ ಹೂಳು ತೆಗೆಯುವ ಕೆಲಸಕ್ಕೆ ಹೆಚ್ಚು ಒತ್ತಾಸೆ ರೈತರಿಂದ ಇತ್ತು. ಹೂಳು ತೆಗೆಯುವುದರಿಂದ ನೀರಿನ ಉಳಿತಾಯ, ಸಮಯದ ಉಳಿತಾಯವೂ ಸಾಧ್ಯ. ಮಾರ್ಚ್ ಅಂತ್ಯದೊಳಗೆ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ನೀರಾವರಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್. ಗಿರೀಶ ಹೇಳಿದರು.ಈ ಕಾಲುವೆ ದುರಸ್ತಿಗೆ ಬಹುದಿನಗಳಿಂದ ಬೇಡಿಕೆ ಸಲ್ಲಿಸಿದ್ದೆವು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಉಳಿದ ಕಾಮಗಾರಿಗೂ ಸರ್ಕಾರ ಅನುದಾನ ಮಂಜೂರು ಮಾಡಬೇಕು ಎಂದು ಅಚ್ಚುಕಟ್ಟು ಪ್ರದೇಶದ ರೈತ ಗಿರೀಶ ದೇಶಪಾಂಡೆ ಹೇಳಿದರು.